ಅಕ್ಷರ ಜಾತ್ರೆಯ ಸಿದ್ಧತೆ ಬಹುತೇಕ ಪೂರ್ಣ

0202KLB14
Published on

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.5 ರಿಂದ 7ವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವೇದಿಕೆ, ಮಂಟಪ ನಿರ್ಮಾಣ ಸೇರಿ ಎಲ್ಲ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಸರ್ವರು ಹುಮ್ಮಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಯಶಸ್ವಿ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮತ್ತು ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮನವಿ ಮಾಡಿದರು.
ಸಮ್ಮೇಳನ ನಡೆಯಲಿರುವ ವಿಶ್ವವಿದ್ಯಾಲಯ ಆವರಣದಲ್ಲಿ ಮುಖ್ಯ ವೇದಿಕೆ, ಆಹಾರ ತಯಾರಿ, ಪುಸ್ತಕ ಮಳಿಗೆ ಸೇರಿ ಸಿದ್ಧತೆ ಪರಿಶೀಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿ ಶರತ್, ಸಮ್ಮೇಳನಕ್ಕಾಗಿ ಸರ್ಕಾರದಿಂದ 10 ಕೋಟಿ ರೂಪಾಯಿ ಬಿಡುಗಡೆಗೊಂಡಿದೆ. ಎಲ್ಲ ಸಿದ್ಧತೆ ಬಹುತೇಕ ಮುಗಿದಿದೆ. ಡಿಸಿಎಂ ಗೋವಿಂದ ಕಾರಜೋಳ ಅವರ ಸಲಹೆಯಂತೆ ಜಿಲ್ಲಾಡಳಿತ ತನ್ನ ಹೊಣೆ ಸಮರ್ಥವಾಗಿ ನಿಭಾಯಿಸಿದೆ. ಸಮ್ಮೇಳನ ಹಾಗೂ ಗೋಷ್ಠಿಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು ಕಸಾಪ ಹೊಣೆ ಎಂದರು.
16 ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳ ಸದಸ್ಯರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆಗಳಾದಂತೆ ಎಚ್ಚರ ವಹಿಸಲಾಗಿದೆ. ಅತಿಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರದಲ್ಲಿ 60 ಹೊಟೇಲ್, 17 ಶಾಲೆ, 10 ಕಲ್ಯಾಣ ಮಂಟಪ, 12 ವಸತಿ ನಿಲಯ, 9 ಅತಿಥಿ ಗೃಹ, 5 ಸರ್ಕಾರಿ ವಸತಿ ಗೃಹ ಸೇರಿ 113 ಸ್ಥಳಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಭೂ ದಾಖಲೆಗಳ ಉಪನಿರ್ದೇಶಕ ಶಂಕರ್ ಖಾದಿ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸಿಪಿಒ ಪ್ರವೀಣಪ್ರಿಯಾ ಡೇವಿಡ್ ಇದ್ದರು.

150 ಆಹಾರ ಕೌಂಟರ್
ಊಟದ ಮನೆಯಲ್ಲಿ 150 ಕೌಂಟರ್ಗಳನ್ನು ಸ್ಥಾಪಿಸಲು ಆಹಾರ ಸಮಿತಿ ನಿರ್ಧರಿಸಿದೆ. ನೋಂದಾಯಿತ ಪ್ರತಿನಿಧಿಗಳಿಗೆ ಪ್ರತ್ಯೇಕ ಕೌಂಟರ್ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಇದ್ದು, ಯಾರಿಗೂ ಸಮಸ್ಯೆಯಾದಂತೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮದವರಿಗೆ ಮಿಡಿಯಾ ಸೆಂಟರ್ ನಿರ್ಮಿಸಿದ್ದು, ಅಲ್ಲಿ ಕಂಪ್ಯೂಟರ್, ವೈಫೈ, ಊಟ ಹಾಗೂ ಮಾಧ್ಯಮ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಶರತ್ ತಿಳಿಸಿದರು.


4000 ಪೊಲೀಸರ ನಿಯೋಜನೆಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗುತ್ತಿದೆ. ಬಂದೋಬಸ್ತ್ಗಾಗಿ 4,000 ಪೊಲೀಸರು, ನಾಲ್ವರು ಎಸ್ಪಿ, 15 ಎಸಿಪಿ, 75 ಸರ್ಕಲ್ ಇನ್ಸ್ಪೆಕ್ಟರ್, 200 ಸಬ್ ಇನ್ಪೆಕ್ಟರ್, 10 ಕೆಎಸ್ಆರ್ಪಿ ತುಕ್ಕಡಿ, 500 ಹೋಮ್ ಗಾರ್ಡ , 700 ಟ್ರಾಫಿಕ್ ಪೊಲೀಸ್ ಹಾಗೂ 500 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎನ್. ನಾಗರಾಜ ತಿಳಿಸಿದರು.

ಡಾ.ಅಪ್ಪಾಜಿ ಅವರನ್ನು ಆಹ್ವಾನಿಸಿದ ಡಿಸಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಶ್ರೀ ಶರಣಬಸವಪ್ಪ ಅಪ್ಪ ಅವರನ್ನು ಭಾನುವಾರ ಭೇಟಿ ಮಾಡಿ ಆಹ್ವಾನಿಸಲಾಗಿದೆ. ಸಮ್ಮೇಳನ ಸಿದ್ಧತೆ ಕುರಿತು ಅಪ್ಪಾಜಿ ಚರ್ಚಿಸಿದ್ದು, ಆಗಮಿಸುವುದಾಗಿ ಹೇಳಿದ್ದಾರೆ. ಖಾಜಾ ಬಂದಾನವಾಜ್ ದರ್ಗಾದ ಸಜ್ಜಾದೆ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದೇನೆ, ಅವರಿಂದ ಮಾಹಿತಿ ಬಂದ ಬೆನ್ನಲ್ಲಿಯೇ ಹೋಗಿ ಭೇಟಿ ಮಾಡಿ ಆಹ್ವಾನಿಸುತ್ತೇವೆ. ಸಮ್ಮೇಳನಕ್ಕೆ ಆಹ್ವಾನಿಸುವಲ್ಲಿ ತಾರತಮ್ಯ ಮಾಡಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.

ಅಂಗಡಿ-ಮನೆ ಸಿಂಗರಿಸಲು ಮನವಿಸಾಹಿತ್ಯ ಸ್ಮಮೇಳನ ಹಿನ್ನಲೆ ನಗರದಲ್ಲಿ ಸಂಭ್ರಮ ಕಂಡು ಬರಲು ಮುಖ್ಯರಸ್ತೆಯಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತಳೀರು ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಬೇಕು. ಅಲ್ಲದೆ ಮೆರವಣಿಗೆ ಹಾದು ಹೋಗುವ ಪ್ರದೇಶದವರು ಸೇರಿ ಎಲ್ಲರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಹಬ್ಬದ ಕಳೆ ತರಬೇಕು ಎಂದು ಡಿಸಿ ಶರತ್ ಮನವಿ ಮಾಡಿದರು.

ಮೂರು ದಿನ ರಜೆ
ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲು ಉದ್ದೇಶಿಸಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೋಮವಾರ ಇಲ್ಲವೇ ಮಂಗಳವಾರ ಆದೇಶ ಹೊರಡಿಸಲಾಗುವುದು. ಬಿ. ಶರತ್, ಜಿಲ್ಲಾಧಿಕಾರಿ

ನಿರಂತರ ಸಂಪರ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ಗೋವಿಂದ ಕಾರಜೋಳ ಅವರು ಪೊಲೀಸ್ ಆಯುಕ್ತರು ಮತ್ತು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನಿತ್ಯ ಕರೆ ಮಾಡಿ ಸಮ್ಮೇಳನ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೇಲಿಂದ ಮೇಲೆ ನಾನು ಬಂದರೆ, ಅಧಿಕಾರಿಗಳು ಸಮ್ಮೇಳನ ತಯಾರಿ ಬಿಟ್ಟು ನನ್ನ ಹಿಂದೆ ಬರುವುದು ಮಾಡುತ್ತಾರೆ. ಇದರಿಂದ ಸಮ್ಮೇಳನಕ್ಕೆ ತೊಂದರೆಯಾಗುತ್ತದೆ ಎಂದು ಖುದ್ದು ಡಿಸಿಎಂ ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿಯೂ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಎಲ್ಲ ತಯಾರಿಗಳು ಅವರ ಸಲಹೆಯಂತೆ ನಡೆದಿವೆ ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net