

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜನರನ್ನು ತಲುಪಲು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮ್ಮೇಳನದ ವಿವಿಧ ಸಮಿತಿಯೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಜನರನ್ನು ಆಹ್ವಾನಿಸುವ ವಿಡಿಯೋಗಳನ್ನು ಚಿತ್ರಮಂದಿರದಲ್ಲಿ ಪ್ರಸಾರ ಮಾಡಿಸಿ. ಜತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್‌ಟಾಗ್ರಾಂ, ಯೂಟ್ಯೂಬ್ ಜತೆಗೆ ಬಸ್ ನಿಲ್ದಾಣ, ರೈಲ್ವೆ, ಮೆಟ್ರೋ ಹಾಗೂ ವಿಮಾನ ನಿಲ್ದಾಣ, ಎಫ್‌ಎಂಗಳಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ. ಅಂತೆಯೇ ಸರ್ಕಾರಿ ಕಚೇರಿಯಲ್ಲಿ ನಡೆಯುವ ಎಲ್ಲ ಪತ್ರ ವ್ಯವಹಾರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಸಂಭ್ರಮ ಲೋಗೋವನ್ನು ಬಳಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಸಮ್ಮೇಳನದ ಎಲ್ಲ ಸಮಿತಿಗೆ ಸ್ವಯಂ ಸೇವಕರ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಮಿತಿ ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿ. ಆಹಾರ, ವೇದಿಕೆ, ವಸತಿ ಸೇರಿದಂತೆ ಸಮಿತಿಗೆ ಅವಶ್ಯಕವಿರುವ ಸ್ವಯಂ ಸೇವಕರ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಎನ್‌ಎಸ್‌ಎಸ್, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ಗಳಲ್ಲಿ ಜಿಲ್ಲೆಯಲ್ಲಿರುವ ಸಂಖ್ಯೆಯನ್ನು ಲೆಕ್ಕ ಮಾಡಿಕೊಂಡು ಪಕ್ಕದ ಜಿಲ್ಲೆಗಳಾದ ಮೈಸೂರು, ರಾಮನಗರ ಜಿಲ್ಲೆಗಳಿಂದ ಸಹ ಸ್ವಯಂ ಸೇವಕರನ್ನು ಪಡೆದುಕೊಳ್ಳಿ ಎಂದು ಸೂಚನೆ ನೀಡಿದರು.
ನಿಯೋಜನೆಯಾಗುವ ಸ್ವಯಂ ಸೇವಕರ ಕೆಲಸ ಅವರ ಕೆಲಸದ ಬಗ್ಗೆ ತರಬೇತಿ ನೀಡಬೇಕು. ಇಲ್ಲವಾದಲ್ಲಿ ಅವರು ಸುಮ್ಮನೆ ತಾವು ತಿಳಿಸುವ ಸ್ಥಳದಲ್ಲಿ ನಿಂತುಕೊಳ್ಳುತ್ತಾರೆ. ಪ್ರಚಾರ ಕೆಲಸಗಳು ಈಗಿನಿಂದಲೇ ಪ್ರಾರಂಭಿಸಬೇಕು. ಅದರಂತೆ ಮೈಸೂರು, ಶ್ರೀರಂಗಪಟ್ಟಣ, ಚಾಮರಾಜನಗರದಲ್ಲಿ ನಡೆಯುವ ದಸರಾ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಚಾರ ಕಾರ್ಯಕ್ರಮ ಕೈಗೊಂಡರೆ ಹೆಚ್ಚಿನ ಜನರನ್ನು ತಲುಪಬಹುದು. ಜತೆಗೆ ಸಮ್ಮೇಳನ ಕುರಿತು ಹಾಡು ಹಾಗೂ ವಿಶೇಷ ವ್ಯಕ್ತಿಗಳಿಂದ ಆಹ್ವಾನ ಕೋರುವ ಬಗ್ಗೆ ಆಡಿಯೋ ಸಿದ್ಧಪಡಿಸಿಕೊಳ್ಳಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಸಮ್ಮೇಳನದಲ್ಲಿ ಪ್ರತಿದಿನ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಎಷ್ಟು ಸ್ವಯಂ ಸೇವಕರು ಬೇಕಾಗಬಹುದು ಎಂದು ಅಂದಾಜಿಸಿ. ಅವರಿಗೆ ಟೀ ಶರ್ಟ್, ಟೋಪಿ, ಊಟದ ವ್ಯವಸ್ಥೆ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಇನ್ನು ನೋಂದಣಿಗೆ ಅಂತಿಮ ದಿನಾಂಕ ನಿಗದಿ ಮಾಡಿ. ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡುವುದು. ಇದರಿಂದ ಹಣದ ದುರ್ಬಳಕೆಯಾಗುವುದು, ನೋಂದಣಿ ರಶೀದಿ ನಕಲು ಆಗುವುದು ತಪ್ಪುತ್ತದೆ. ರಾಜ್ಯಾದ್ಯಂತ ಹೆಚ್ಚಿನ ಜನರು ಸಂಚರಿಸುವ 87 ಮುಖ್ಯರಸ್ತೆಗಳನ್ನು ಗುರುತಿಸಿ. ರಸ್ತೆಗೆ ಸಮ್ಮೇಳನದ ಪ್ರಚಾರ ನೀಡುವ ಕಮಾನು ಅಳವಡಿಸಬೇಕು ಎಂದು ತಿಳಿಸಿದರು.
ಸಾರಿಗೆ ಸಮಿತಿಯವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವಶ್ಯಕವಿರುವ ಸರ್ಕಾರಿ, ಖಾಸಗಿ ವಾಹನಗಳನ್ನು ಪಡೆದುಕೊಂಡು ವಸತಿ ಸ್ಥಳಗಳಿಂದ ಗಣ್ಯರನ್ನು ಕರೆತರಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಂಟ್ರೋಲ್ ರೂಂ ತೆರೆದು ವಾಹನಗಳ ಸಂಚಾರದ ಮಾಹಿತಿಯನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಆನಂದ್, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.