

ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ತಿಳಿಸಿದರು.
ನಗರದ ಬಂದೀಗೌಡ ಬಡಾವಣೆಯ ಕಸಾಪ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ತಾಲೂಕಿಗೆ ಸಂಬಂಧಿಸಿದ ಸಾಹಿತಿಗಳು, ಕವಿ, ಜಾನಪದ ಕಲಾವಿದರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಜತೆಗೆ ಗಣ್ಯ ವ್ಯಕ್ತಿಗಳ, ಸಮಾಜ ಸೇವಕರ, ಶಿಕ್ಷಣ ತಜ್ಞರು, ಉದ್ಯಮಿಗಳ, ಸಂಘ ಸಂಸ್ಥೆಗಳ ಮಾಹಿತಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ರೈತ, ದಲಿತ ಹಾಗೂ ಮಹಿಳಾ ಸಂಘಟನೆ ಮಾಹಿತಿಯನ್ನೂ ಸಹ ಪಡೆದುಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಪ್ರಮುಖ ಕೈಗಾರಿಕೆ, ಆಯಾ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳ ಪಟ್ಟಿಯನ್ನು ಸಂಗ್ರಹಿಸಿ. ಈ ಎಲ್ಲ ಮಾಹಿತಿಗಳನ್ನು ಮೇ.25ರೊಳಗೆ ಜಿಲ್ಲಾ ಕಸಾಪ ಘಟಕಕ್ಕೆ ಸಲ್ಲಿಸಬೇಕು. ಇದಲ್ಲದೆ ಎಲ್ಲ ಹೋಬಳಿ ಘಟಕಗಳನ್ನೂ ರಚನೆ ಮಾಡಿ ಅದರ ಪದಾಧಿಕಾರಿಗಳ ಪಟ್ಟಿ ನೀಡಬೇಕು. ತಾಲೂಕು ಮಟ್ಟದಲ್ಲಿ ಕವಿಗೋಷ್ಠಿ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಜಿಲ್ಲಾ ಕವಿಕಾವ್ಯ ಪರಿಚಯ ಮಾಲಿಕೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಅಮೆರಿಕ ಪ್ರವಾಸದಲ್ಲಿರುವ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಷಿ ಹಿಂತಿರುಗಿದ ನಂತರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.