ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಸಹಾಯವಾಣಿಯೂ ಆರಂಭ, ಮೂಡಿದೆ ಹಬ್ಬದ ವಾತಾವರಣ

85th Sahitya Sammelana 5
Published on

ಕಲಬುರಗಿ: ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಇದರಲ್ಲಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇರಲಿದೆ. ಮೊಬೈಲ್ 7259542950, 8105542950, 7619542950, 9008542950ಗಳಿಗೆ ಸಂಪರ್ಕಿಸಬಹುದು. ಸಹಾಯವಾಣಿ ಕೇಂದ್ರದಲ್ಲಿ ನಾಲ್ವರು ಇರಲಿದ್ದು, ಈ ಪೈಕಿ ಒಬ್ಬ ಅಧಿಕಾರಿ, ಮೂರು ಸಹಾಯಕರು ಪಾಳಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಉಚಿತ ಬಸ್ ಸೇವೆ ಯತ್ನ : ಗುಲ್ಬರ್ಗ ವಿವಿ ಆವರಣದಲ್ಲಿ ಕಾರ್ಯಕ್ರಮ ಇದ್ದುದರಿಂದ ಜನತೆಗೆ ನಗರದಿಂದ ಉಚಿತ ವಾಹನ ಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಕೆಲ ಶಿಕ್ಷಣ ಸಂಸ್ಥೆಗಳು ಬಸ್​​ಗಳ ವ್ಯವಸ್ಥೆಗೆ ಮುಂದೆಬಂದಿದ್ದು, ಈಶಾನ್ಯ ಸಾರಿಗೆ ಸಿಟಿ ಬಸ್ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ.

ಸ್ವಚ್ಛತೆಗೆ ಆದ್ಯತೆ: ಸಮ್ಮೇಳನಕ್ಕೆ ನಾಡಿನ ಎಲ್ಲೆಡೆಯಿಂದ ಅಪಾರ ಜನರು ಬರಲಿದ್ದು, ನಗರ ಮತ್ತು ಸಮ್ಮೇಳನ ನಡೆಯುವ ಸ್ಥಳದ ಸುತ್ತ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಮಹತ್ವ ಕೊಡುವುದರ ಜತೆಗೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬ್ಯಾನರ್, ಕಟೌಟ್ಗಳನ್ನು ಹಾಕಲಾಗಿದೆ. ಸ್ವಚ್ಛತೆಗಾಗಿ ಸರಿಸುಮಾರು 500 ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.

ವಸತಿ/ಸಾರಿಗೆ ಸೌಲಭ್ಯ: ನಗರದಲ್ಲಿ 60 ಲಾಡ್ಜ್, 15 ಕಲ್ಯಾಣ ಮಂಟಪ, ಸರ್ಕಾರದ ಐದು ಅತಿಥಿಗೃಹ, ಗುಲ್ಬರ್ಗ ವಿವಿ, ವಿಟಿಯು, ಇಎಸ್ಐಸಿ ಅತಿಥಿ ಗೃಹಗಳು, ಪ್ರಮುಖ ವಿದ್ಯಾ ಸಂಸ್ಥೆಗಳ ವಸತಿನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮ್ಮೇಳನಕ್ಕೆ ಹೋಗಿ ಬರಲು ಉಚಿತ ವಾಹನ ಸೌಕರ್ಯವಿದೆ. 24 ನೋಡಲ್ ಅಧಿಕಾರಿ, 200 ಸಂಪರ್ಕ ಅಧಿಕಾರಿ ಮತ್ತು 400 ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. 150ಕ್ಕೂ ಹೆಚ್ಚಿನ ಜನರು ಉಳಿದುಕೊಳ್ಳುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಶಿಕ್ಷಣ ಸಂಸ್ಥೆಗಳಿಂದ 200 ಮಿನಿ ಬಸ್, ಎನ್ಈಕೆಆರ್ಟಿಸಿ 20 ಬಸ್, 90 ಸಿಟಿ ಬಸ್, 100 ಕಾರು ಹಾಗೂ 20 ಇನ್ನೋವಾ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ತಾಲೂಕಿನಿಂದ 2 ಬಸ್ ವ್ಯವಸ್ಥೆ ಮಾಡಲಾಗಿದೆ.

ಅಕ್ಷರ ಜಾತ್ರೆಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಸಣ್ಣಪುಟ್ಟ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಹಂತದಲ್ಲೂ ಅಪಸ್ವರ, ತೊಂದರೆ ಕಾಣಿಸದಂತೆ 16 ಸಮಿತಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮಾದರಿ ನುಡಿ ಜಾತ್ರೆ ಮಾಡುವುದು ನಮ್ಮ ಉದ್ದೇಶ.
| ಶರತ್.ಬಿ ಜಿಲ್ಲಾಧಿಕಾರಿ

ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ವಿಶೇಷ ಅಭಿಯಾನ ನಡೆದಿದೆ. ಕಲಬುರಗಿ, ಬೀದರ್, ಯಾದಗರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಾಹನ, 48 ಬೀದಿ ನಾಟಕ ಕಲಾವಿದರು ಜಿಲ್ಲೆಯ ಎಲ್ಲ ಗ್ರಾಮಗಳಿಗೆ ತೆರಳಿ ಸರ್ಕಾರದ ಯೋಜನೆಗಳ ಜತೆಗೆ ಸಮ್ಮೇಳನಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಸಮ್ಮೇಳನ ಯಶಸ್ವಿಗೆ 16 ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿ ಸದಸ್ಯರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆಗಳಾದಂತೆ ಎಚ್ಚರ ವಹಿಸಲಾಗಿದೆ.

ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗುತ್ತಿದೆ. ಬಂದೋಬಸ್ತ್ಗಾಗಿ 4,000 ಪೊಲೀಸರು, ನಾಲ್ವರು ಎಸ್ಪಿ, 15 ಎಸಿಪಿ, 75 ಸಿಪಿಐ, 200 ಪಿಎಸ್ಐ, 10 ಕೆಎಸ್ಆರ್ಪಿ ತುಕಡಿ, 500 ಗೃಹರಕ್ಷಕ ದಳ, 700 ಸಂಚಾರ ಹಾಗೂ 500 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.
| ಡಾ.ಎಂ.ಎನ್. ನಾಗರಾಜ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net