

ಕಲಬುರಗಿ: ಕನ್ನಡದ ಮೇಲಿನ ಕಕ್ಕುಲತೆಗೆ ಬಿಸಿಲು, ದೂರ ಯಾವೂದೂ ಲೆಕ್ಕಕ್ಕಿಲ್ಲ ಎಂಬುದಕ್ಕೆ ಕಲಬುರಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಾಕ್ಷಿಯಾಯಿತು. ನಾಡಿನುದ್ದಗಲದಿಂದಲೂ ಆಗಮಿಸಿದ ಕನ್ನಡಾಭಿಮಾನಿಗಳು ಬುಧವಾರ ಬೆಳಗ್ಗೆ ಕಲಬುರಗಿಗೆ ಬಂದಿಳಿದರು, ಇನ್ನು ಸಂಘಟಕರೇ ಅಚ್ಚರಿಪಡುವಷ್ಟು ಸಂಖ್ಯೆ ಸಮ್ಮೇಳನ ನಡೆಯುತ್ತಿರುವ ವಿಶ್ವವಿದ್ಯಾಲಯದಲ್ಲಿ ಬೀಡುಬಿಟ್ಟಿದೆ.
ಕನ್ನಡದ ಸಂಭ್ರಮದಲ್ಲಿ ಮಿಂದೇಳುವ, ಕನ್ನಡದ ದನಿಗೆ ಕಿವಿಯಾಗಲು ಬಂದವರಿಗೆ ಕೂಡ ಮೊದಲ ದಿನ ಕೊರತೆಯೂ ಆಗಲಿಲ್ಲ. ಜಾನಪದ ಕಲಾತಂಡದ ಮೆರಗಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಡಗರ ಹೆಚ್ಚಿಸಿದರೆ, ಸಮ್ಮೇಳನಾಧ್ಯಕ್ಷರ ಹಿತಮಾತುಗಳು, ಮಾರ್ಗದರ್ಶನ ಸಾಹಿತ್ಯ ಭೋಜನದಂತಾಯಿತು.
ಇನ್ನು ಊಟದ ವಿಚಾರಕ್ಕೆ ಬಂದರೆ ಸಜ್ಜೆ / ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಮಡಿಕೆ ಕಾಳು, ಚಟ್ನಿಪುಡಿ, ಅನ್ನ-ಸಾಂಬಾರ್, ಮೋತಿ ಚೂರು ಲಡ್ಡು ಕನ್ನಡ ಪ್ರೇಮಿಗಳ ಬಾಯಿ ಚಪ್ಪರಿಸುವಂತಿತ್ತು.
ಸುಗ್ರಾಸ ಗೋಷ್ಠಿ: ಕವಿರಾಜಮಾರ್ಗದಲ್ಲಿ ಕುಮಾರವ್ಯಾಸ ಪ್ರಸ್ತಾಪಿಸಿದ ' ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಂ ಧರ್ಮಮುಮಂ' ಅಭಿಪ್ರಾಯದಡಿಯಲ್ಲೇ ಮೊದಲ ದಿನ ಸಮ್ಮೇಳನ ಸಾಗಿ ಬಂದಿದ್ದು, ಅಧ್ಯಕ್ಷರ ಮಾತುಗಳೂ ಸಹ ಮೆದುವಾಗಿ ಚುಚ್ಚುವಂತಿತ್ತು. ತಾಳುವಿಕೆಯೇ ತಪವಾದ ಕನ್ನಡಿಗರಿಗೆ ಸೈರಣೆಯನ್ನು ಬೋಧಿಸಬೇಕಾದ್ದಿಲ್ಲ ಎಂಬ ಮಾತು ಸಾಕಷ್ಟು ಮಾರ್ಮಿಕವಾಗಿತ್ತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಯದ ಮಿತಿ ಹೆಚ್ಚು ತಪ್ಪದಂತೆ ಗೋಷ್ಠಿಗಳು ನಡೆದಿದ್ದೂ ಸಹ ಈ ಸಮ್ಮೇಳನದ ವಿಶೇಷ. "ಸಮಕಾಲೀನ ಸಾಹಿತ್ಯ: ಚಹರೆ ಮತ್ತು ಸವಾಲುಗಳು" ಗೋಷ್ಠಿಯಲ್ಲಿ 'ಕೃತಿ ಚಿರಾಯು, ಸಾಹಿತ್ಯ ಅಲ್ಪಾಯುಷಿ' ಎಂಬ ಸಾಹಿತಿ ಡಾ.ಚಂದ್ರಶೇಖರ ನಂಗಲಿ ಮಾತನ್ನು ಗೋಷ್ಠಿಯಲ್ಲಿದ್ದವರು ಮೆಚ್ಚಿದರು. ಪಠ್ಯ ವಿದ್ಯುನ್ಮಾನರೂಪ ಪಡೆಯಬೇಕೆಂಬ ಮಹತ್ವದ ಸಲಹೆ ಈ ಸಮ್ಮೇಳನದಿಂದ ಹೊರಹೊಮ್ಮಿತು, ಇದು ಕನ್ನಡ ಭಾಷೆ: ಹೊಸ ತಂತ್ರಜ್ಞಾನ ಗೋಷ್ಠಿಯ ಪ್ರತಿಫಲನ.
ಇನ್ನೊಂದು ಮುಖ್ಯ ಸಂಗತಿ ಎಂದರೆ, ಕನ್ನಡ ಭಾಷೆ ಕೀಲಿ ಮಣೆ ಸಮಸ್ಯೆ, ಅಕ್ಷರ ಸಂವಹನ ಸೇರಿದಂತೆ ತಂತ್ರಾಂಶಕ್ಕೆ ಸಂಬಂಧಿಸಿದ ಹಲವು ಸವಾಲು ಎದುರಿಸುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಕ್ತ ತಂತ್ರಜ್ಞಾನ ನೀತಿ ಜಾರಿಯ ಅಗತ್ಯತೆಯೂ ಪ್ರತಿಪಾದನೆಯಾಯಿತು. ಕೊನೆಯದಾಗಿ, ಜನರ ಪುಸ್ತಕ ಪ್ರೀತಿ ಲೆಕ್ಕಹಾಕಲು ಸಾಧ್ಯವಿಲ್ಲ. ಬೆಳಗ್ಗೆಯಿಂದ ರಾತ್ರಿ ವರೆಗೂ ಪುಸ್ತಕ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತಿತ್ತು.