

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಎಷ್ಟು ಮಳಿಗೆ ಹಾಕಬಹುದು ಎಂದು ಯೋಜನೆ ರೂಪಿಸಿಕೊಳ್ಳಿ. ಮುಖ್ಯವಾಗಿ ಒಂದೇ ರೀತಿಯ ಬದಲು ವಿವಿಧ ರೀತಿಯ ವೈವಿಧ್ಯಮಯ ಮಳಿಗೆ ಇರಲಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮ್ಮೇಳನದ ವಿವಿಧ ಸಮಿತಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ ಮಳಿಗೆ ಜತೆಗೆ ಇಲಾಖೆಗಳಿಂದ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಸರ್ಕಾರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬೇರೆ ಜಿಲ್ಲೆಗಳಿಗೂ ಮಳಿಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಆದ್ದರಿಂದ ಮಳಿಗೆ ವಿನೂತನ ಹಾಗೂ ಪರಿಣಾಮಕಾರಿಯಾಗಿ ಸ್ಥಾಪಿಸುವ ಸಂಬಂಧ ಈಗಿನಿಂದಲೇ ಚರ್ಚಿಸಿ ಎಂದರು.
ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನದಿಂದ ಸಮಿತಿಗಳ ಸಭೆ ನಡೆಲಾಗಿದೆ. ಪ್ರತಿ ಸಮಿತಿ ಕೂಡ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿ. ಇನ್ನು ಸಮ್ಮೇಳನಕ್ಕೆ ಬರುವ ಮಹಿಳಾ ಗಣ್ಯರನ್ನು ಸೇರಿದಂತೆ ಪ್ರತಿ ಮಹಿಳೆಯರಿಗೂ ವಿಶೇಷ ಕಾಳಜಿ ವಹಿಸಿ. ಅವರಿಗೆ ಬೇಕಾದಂತಹ ಮೂಲ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರಿಗೆ ಗೌರವ ಹಾಗೂ ರಕ್ಷಣೆಯನ್ನು ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಿ ಸೂಕ್ತ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದರು.
ವಸತಿ ಸಮಿತಿಯು ಸಮ್ಮೇಳನಕ್ಕೆ ಬರುವ ಗಣ್ಯರು, ಗೋಷ್ಠಿಗೆ ಬರುವವರು, ನೋಂದಣಿ ಮಾಡಿಸುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದ ಕಾರಣ ಜಿಲ್ಲೆಯಲ್ಲಿರುವ ಹೋಟೆಲ್, ಸಮುದಾಯ ಭವನ, ವಿಶ್ವವಿದ್ಯಾನಿಲಯ, ಹಾಸ್ಟೆಲ್, ಹೋಂ ಸ್ಟೇ, ರೆಸಾರ್ಟ್, ವಸತಿ ಕಲ್ಪಿಸಲು ಪತ್ರ ವ್ಯವಹಾರ ನಡೆಸಿ ಈಗಲೇ ಬುಕ್ ಮಾಡುವ ಕಾರ್ಯವಾಗಬೇಕು. ಮದ್ದೂರು, ಶ್ರೀರಂಗಪಟ್ಟಣ ತಾಲೂಕು ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಹೋಟೆಲ್, ರೆಸಾರ್ಟ್‌ಗಳಲ್ಲಿ ಕೊಠಡಿಯನ್ನು ಕಾಯ್ದಿರಿಸಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಅಲ್ಲಿ ಮೂಲ ವ್ಯವಸ್ಥೆಗಳ ಬಗ್ಗೆಯೂ ಗಮನಹರಿಸಬೇಕು. ವಸತಿ ವ್ಯವಸ್ಥೆ ಇರುವ ಸ್ಥಳದಿಂದ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ ಮಾಡಲಾಗುವುದು. ವಸತಿ ಸಮಿತಿಯು ನಿಮ್ಮ ಹಂತದಲ್ಲಿ ಕೂಡಲೇ ಸಭೆ ನಡೆಸಿ ಕ್ರಿಯಾಯೋಜನೆಯನ್ನು ಸಲ್ಲಿಸಬೇಕು ಎಂದರು.
ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿ ಎಲ್ಲ ರಸ್ತೆಗಳು ಹಾಗೂ ಮುಖ್ಯದ್ವಾರಗಳಿಗೂ ವಿದ್ಯುತ್ ಅಲಂಕಾರ ಮಾಡಬೇಕು. ಅದಕ್ಕೆ ಸಂಬಂಧಿಸಿದ ಯೋಜನೆ ರಚಿಸಿ. ಸ್ವಚ್ಛತಾ ಸಮಿತಿ ಹಾಗೂ ನಗರ ಅಲಂಕಾರ ಸಮಿತಿಯನ್ನು ಒಳಗೊಂಡಂತೆ ಒಂದು ಉಪ ಸಮಿತಿಯನ್ನು ರಚಿಸಲಾಗುವುದು. 2 ಸಮಿತಿಯು ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದ ಡಿಸಿ, ಕನ್ನಡ ರಥಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅದಕ್ಕೆ ಸಂಬಂಧಿಸಿದಂತೆ ರೂಟ್‌ಮ್ಯಾಪ್ ಹಾಗೂ ವೇಳಾಪಟ್ಟಿಯನ್ನು ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿಯು ತಯಾರಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಪರ್ಕದಲ್ಲಿದ್ದುಕೊಂಡು ಯೋಜನೆ ರೂಪಿಸಿ ತುರ್ತಾಗಿ ನೀಡಬೇಕು. ವಾಡಿಕೆ ಪ್ರಕಾರ ರಾಜ್ಯದಲ್ಲಿ ಭುವನೇಶ್ವರಿ ದೇವಾಲಯವು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇದ್ದು, ಅಲ್ಲಿಂದಲ್ಲಿಯೇ ಕನ್ನಡ ಜ್ಯೋತಿ ರಥಯಾತ್ರೆ ಪ್ರಾರಂಭವಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಆಹಾರ ಸಮಿತಿ ಉಪಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಸಮಿತಿಯ ಅಧ್ಯಕ್ಷೆ ಸುನಂದಾ ಜಯರಾಂ, ಉಪಾಧ್ಯಕ್ಷೆ ಸೌಭಾಗ್ಯ ಮಹದೇವು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ, ವಸತಿ ಸಮಿತಿ ಹಾಗೂ ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿಯ ಎಂ.ಟಿ.ರಾಜೇಂದ್ರ ಸೇರಿದಂತೆ ಇತರರಿದ್ದರು.