

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ನಗರದ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಮುಂಭಾಗ ಭಾನುವಾರ ಚಾಲನೆ ದೊರೆಯಿತು.
ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಕಲಾಮಂದಿರದಲ್ಲಿ ಫೆ.8 ರಂದು ಸಮ್ಮೇಳನ ಏರ್ಪಡಿಸಲಾಗಿದೆ. ಪ್ರಚಾರ ರಥವು ಫೆ.7ರವರೆಗೆ ನಗರದ ಎಲ್ಲ ಭಾಗಗಳಲ್ಲೂ ಸಂಚರಿಸಿ ಸಮ್ಮೇಳನಕ್ಕೆ ನಗರದ ನಾಗರಿಕರಿಗೆ ಆಹ್ವಾನವನ್ನು ನೀಡಲಿದೆ.
ರಥಕ್ಕೆ ಚಾಲನೆ ನೀಡಿದ ಕೆ. ಹರೀಶ್ ಗೌಡ ಮಾತನಾಡಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ರಾಜ್ಯಮಟ್ಟದ ಸಮ್ಮೇಳನದ ರೀತಿಯಲ್ಲಿ ಅದ್ದೂರಿಯಾಗಿ ನಡೆಸಲಾಗುವುದು ಎಂದು ಹೇಳಿದರು.
ಚಾಮರಾಜ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ನೆಲೆಸಿದ್ದಾರೆ. ಅದೇ ರೀತಿ ಮೈಸೂರು ವಿಶ್ವ ವಿದ್ಯಾಲಯ, ಮುಕ್ತ ವಿಶ್ವ ವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಚಾಮರಾಜ ಕ್ಷೇತ್ರದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ಕನ್ನಡ ಭಾಷೆ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ಆತಂಕವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜನರಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಲು ವಿಧಾನಸಭೆವಾರು ಸಮ್ಮೇಳನ ನಡೆಸಲಾಗುತ್ತಿದೆ. ಈ ಹಿಂದೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಫೆ.8 ರಂದು ಕಲಾಮಂದಿರದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದ್ದು, ಸಮ್ಮೇಳನಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರನ್ನು ಸೆಳೆಯಲು ಪ್ರಚಾರ ರಥ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಕನ್ನಡ ಭಾಷೆ ಕೇವಲ ಭಾಷೆಯಲ್ಲಿ ಕನ್ನಡದ ಸಂಸ್ಕೃತಿಯ ಸಂಕೇತ. ಸಾಂಸ್ಕೃತಿಕ ಎಚ್ಚರ ನೀಡಲು ಸಾಹಿತ್ಯ ಸಮ್ಮೇಳನದ ಅವಶ್ಯಕತೆ ಎಂದು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಎಂ. ಚಂದ್ರಶೇಖರ್, ವೈ.ಡಿ. ರಾಜಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು, ಪ್ರಕಾಶ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಹಾಗೂ ಇತರರು ಇದ್ದರು.