ಜಿಲ್ಲಾ ಕಸಾಪ ಮೇಲೆ ಹಲವರ ಕಣ್ಣು

KLR-WEB
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವಿಚಾರ ಇತ್ಯರ್ಥವಾಗುವ ಮುನ್ನವೇ ಜಿಲ್ಲೆಯಲ್ಲಿ ಆಕಾಂಕ್ಷಿಗಳು ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ.

ಪರಿಷತ್ ಜಿಲ್ಲಾಧ್ಯಕ್ಷ ಡಾ.ನಾಗಾನಂದ ಕೆಂಪರಾಜು ಅವರ ಅಧಿಕಾರ ರಾಜ್ಯ ಸಮಿತಿ ಅಧ್ಯಕ್ಷರ ಅವಧಿ ಜತೆಯಲ್ಲೇ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ ನಡುವೆ ಕಸಾಪ ಸದಸ್ಯರಾಗಿರುವ ಪಿಯು ಹಾಗೂ ಪದವಿ ಕಾಲೇಜಿನ ಅನೇಕ ಉಪನ್ಯಾಸಕರು ಮತ್ತೊಂದು ಅವಧಿಗೆ ತಾವೇ ಸ್ಪರ್ಧಿಸಬೇಕೆಂದು ಪುಸಲಾಯಿಸುತ್ತಿರುವುದರಿಂದ ಸದ್ದು ಗದ್ದಲವಿಲ್ಲದೆ ಆಪ್ತರೊಂದಿಗೆ ರಹಸ್ಯ ಸಮಾಲೋಚನಾ ಸಭೆ ನಡೆಸುವ ಮೂಲಕ ಸದಸ್ಯರ ನಾಡಿಮಿಡಿತ ತಿಳಿಯಲು ಯತ್ನಿಸಿದ್ದಾರೆ ಎನ್ನಲಾಗಿದೆ.

4 ವರ್ಷಗಳಲ್ಲಿ ನಡೆದಿರುವ ಕನ್ನಡಪರ ಚಟುವಟಿಕೆ ಆಧರಿಸಿ ನನ್ನನ್ನು ಬೆಂಬಲಿಸಬೇಕೆಂದು ನಾಗಾನಂದ ಹಕ್ಕು ಮಂಡಿಸಿದ್ದರೆ, ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಅವರ ಬೆಂಬಲಿಗರು ಕಸಾಪ ಬಲಪಡಿಸಲು ಸಹಕಾರ, ಮಾರ್ಗದರ್ಶನ ನೀಡಿದ ಹಿರಿಯರನ್ನು ಕಡೆಗಣಿಸಿರುವ ನಾಗಾನಂದ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ನೈತಿಕತೆ ಇಲ್ಲ, ಎಲ್ಲರೊಂದಿಗೆ ಕನ್ನಡ ತೇರನ್ನು ಎಳೆದುಕೊಂಡು ಹೋಗಲು ಸಮರ್ಥರಿರುವ ಜೆ.ಜೆ.ನಾಗರಾಜು ಸಾರಥ್ಯ ವಹಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಾಗರಾಜು ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದಲ್ಲದೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಕನ್ನಡಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸಂಚಲನ ಉಂಟು ಮಾಡಿದ್ದಾರೆ.

ನಾಗಾನಂದ ಅವರು ಕಾಲೇಜು ಉಪನ್ಯಾಸಕರ ಬೆಂಬಲ ಗಿಟ್ಟಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವ ಸುಳಿವು ಅರಿತ ನಾಗರಾಜ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಮಣೆ ಹಾಕುವ ಮೂಲಕ ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ಪ್ರಬಲ ಅಭ್ಯರ್ಥಿಗೆ ಶೋಧ: ನಾಗಾನಂದ ಮತ್ತು ನಾಗರಾಜು ನಡುವಿನ ಪೈಪೋಟಿಯಿಂದ ಬೇಸತ್ತಿರುವ ಗುಂಪೊಂದು ಇವರಿಬ್ಬರನ್ನು ಹಿಂದಿಕ್ಕಲು ಪ್ರಬಲ ಅಭ್ಯರ್ಥಿಗೆ ಶೋಧ ನಡೆಸುತ್ತಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ 40 ವರ್ಷಗಳಿಂದ ಶ್ರಮಿಸಿರುವ ನಿವೃತ್ತ ಸರ್ಕಾರಿ ನೌಕರ, ಪರಿಸರ ಪ್ರೇಮಿ, ಗಾಯಕ ಎಚ್.ಎ.ಪುರುಷೋತ್ತಮರಾವ್ ಅವರನ್ನು ಕಣಕ್ಕೆ ಇಳಿಸಿದಲ್ಲಿ ಪೈಪೋಟಿ ಕುಗ್ಗುವುದಲ್ಲದೆ ಅವಿರೋಧ ಆಯ್ಕೆಗೂ ದಾರಿಯಾಗಬಹುದೆಂಬ ಕಾರಣಕ್ಕೆ ಸಮಾನ ಮನಸ್ಕರು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಪುರುಷೋತ್ತಮರಾವ್ ಒಪ್ಪದಿದ್ದರೆ ಆದಿಮ ಸಂಸ್ಥೆ ಕಡೆಯಿಂದ ಒಬ್ಬರನ್ನು ಅಭ್ಯರ್ಥಿಯನ್ನಾಗಿಸುವ ಚಿಂತನೆ ನಡೆಯುತ್ತಿದ್ದು, ನಿಜವೇ ಆದಲ್ಲಿ ಚುನಾವಣೆ ರಂಗೇರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಕಳೆದ ಬಾರಿ ಸೋತ ಮಾಲೂರು ಅಶ್ವತ್ಥರೆಡ್ಡಿ ಸಹ ಸ್ಪರ್ಧೆಗೆ ಇಳಿಯಬಹುದು ಎನ್ನಲಾಗಿದೆ, ಬಂಗಾರಪೇಟೆ ತಾಲೂಕು ಕಸಾಪ ಅಧ್ಕಕ್ಷ ತೇ.ಸಿ.ಬದರೀನಾಥ್, ಮಾಲೂರು ತಮ್ಮಯ್ಯ, ಶ್ರೀನಿವಾಸಪುರ ತಾಲೂಕಿನ ಹಿರಿಯ ಪತ್ರಕರ್ತ ಮುನಿವೆಂಕಟೇಗೌಡ, ಮುಳಬಾಗಿಲಿನ ಡಾ.ಅರಿವು ಶಿವಪ್ಪ, ಕನ್ನಡಪರ ಸಂಘಟನೆಗಳ ಪರ ಮೇಡಿಹಾಳ ರಾಘವೇಂದ್ರ, ಕೆ.ಎನ್.ತ್ಯಾಗರಾಜು, ಕನ್ನಡ ಮಿತ್ರ ವೆಂಕಟಪ್ಪ, ಕೋಲಾರದ ಗೋಕುಲ್ ವಿದ್ಯಾಸಂಸ್ಥೆ ಮುಖ್ಯಸ್ಥರಾದ ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶರಣ ಸಾಹಿತ್ಯ ಪರಿಷತ್ ಬಿ.ಸುರೇಶ್ ಸೇರಿ ಹತ್ತಾರು ಜನರ ಹೆಸರು ಕೇಳಿಬರುತ್ತಿದೆ.

ದಲಿತ ಮುಖಂಡರ ಚಿಂತನೆ:

ಇತ್ತೀಚಿಗೆ ಸಭೆ ಸೇರಿದ್ದ ಜಿಲ್ಲೆಯ ಹಿರಿಯ ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಆದಿಮ ರಾಮಚಂದ್ರಪ್ಪ, ವಕ್ಕಲೇರಿ ರಾಜಪ್ಪ ಮುಂತಾದವರು, ಜಿಲ್ಲೆಯ ಅಭಿವೃದ್ಧಿ ಸೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ಕುರಿತು ಗಂಭೀರ ಚರ್ಚೆ ನಡೆಸಿದ ವೇಳೆ ಕಸಾಪದಲ್ಲಿ ದಲಿತರ ಕಡೆಗಣನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲೆಯಿಂದ ಕ್ರಿಯಾಶೀಲ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಕುರಿತು ಗಮನ ಸೆಳೆದು ಅಕ್ಟೋಬರ್‌ನಲ್ಲಿ ಬೃಹತ್ ಸಮಾವೇಶ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದು ಜಿಲ್ಲೆಯ ಕಸಾಪದಲ್ಲಿ ಹೊಸ ಮನ್ವಂತರದ ಧ್ಯೋತಕ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net