ಕನ್ನಡ ಭವನ ಮಾರಾಟಕ್ಕೆ ಚಿಂತನೆ: ಕಸಾಪ ನೂತನ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ವಿವಾದ

Kannada Sahitya Parishad district president press conference Mandya
Published on

ಮಂಡ್ಯ: ನಗರದ ಕಸಾಪ ಭವನವನ್ನು ರಾಜ್ಯಸರ್ಕಾರದ ಇಲಾಖೆಗೆ ನೀಡುವುದು ಅಥವಾ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವುದಕ್ಕೆ ಚಿಂತಿಸಲಾಗಿದೆ. ಅಂತೆಯೇ ನೂತನ ಕನ್ನಡ ಭವನವನ್ನು ನಗರದ ಕೇಂದ್ರಭಾಗದಲ್ಲಿ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ತಿಳಿಸಿದರು.

ಈಗಿರುವ ಭವನ ತೀರಾ ಚಿಕ್ಕದಾಗಿದ್ದುಘಿ, ಅದನ್ನು ವಿಸ್ತರಿಸುವ ದೃಷ್ಠಿಯಿಂದ ಈ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲ ಸಮಾಜದ ವರ್ಗದ ಜನ ಸಮೂಹಕ್ಕೆ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಪರಿಷತ್‌ನ ಎಲ್ಲ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದು, ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಡಾ.ಹುಸ್ಕೂರು ಕೃಷ್ಣೇಗೌಡ, ಸುಜಾತ ಕೃಷ್ಣ ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರಾಗಿ ಬಿ.ಎಂ.ಅಪ್ಪಾಜಪ್ಪ ನೇಮಕಗೊಂಡಿದ್ದಾರೆ. ಮುಂದಿನ ವಾರದಲ್ಲಿ ಎಲ್ಲ ತಾಲೂಕಿಗೆ ಭೇಟಿ ನೀಡಿ, ಆಸಕ್ತಿಯಿಂದ ಕೆಲಸ ಮಾಡುವವರನ್ನು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗುವುದು. ಜಿಲ್ಲಾ ಸಮ್ಮೇಳನಕ್ಕೆ 6 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ನೀಡಲಿದ್ದು, ಅದನ್ನು 6.50 ಲಕ್ಷ ರೂ.ಗೆ ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು. ತಾಲೂಕು ಸಮ್ಮೇಳನಕ್ಕೆ 1 ಲಕ್ಷ ರೂ, ಹೋಬಳಿ ಸಮ್ಮೇಳನಕ್ಕೆ 50 ಸಾವಿರ ರೂ ನೀಡುತ್ತಿದ್ದು, ಅದನ್ನು ಹೆಚ್ವಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಒಂದು ತಿಂಗಳಿನಲ್ಲಿ ಹೊಸ ಆಡಳಿತ ಮಂಡಳಿಯ ಕಾರ್ಯಗಳನ್ನು ಮುಗಿಸಿ ಅಧಿಕೃತವಾಗಿ ಸಾಹಿತ್ಯ ಪರಿಷತ್ ಕೆಲಸಗಳನ್ನು ಪ್ರಾರಂಭಿಸಲಾಗುವುದು. ಸಮ್ಮೇಳನದ ವಿಚಾರವಾಗಿ ನೂರು ಜನರ ಪೈಕಿ ಐವರು ವಕ್ರವಾಗಿ ಮಾತನಾಡುವುದು ಸಹಜ. ಜಿಲ್ಲೆಗೆ ಸಮ್ಮೇಳನ ತಂದ ಮಹೇಶ ಜೋಶಿ ಕಾಲೆಳೆಯುವುದು ಶೋಭೆ ತರುವಂತದ್ದಲ್ಲ. ಹಾಗೆಯೇ ಹಾವೇರಿ ಸಮ್ಮೇಳನದ ಬಗ್ಗೆ ಕೆಲವರು ತುಚ್ಛವಾಗಿ ಮಾತನಾಡಿದ್ದರಿಂದಾಗಿ, ಅಲ್ಲಿನ ಜನರು ಪ್ರತಿಭಟನೆ ನಡೆಸುವಂತಾಗಿದ್ದು, ಇದು ಬೇಕಿತ್ತೇ ಎಂದು ಪ್ರಶ್ನಿಸಿದರು.

ಹೊಸ ಹೊಸ ಯೋಜನೆಗಳನ್ನು ತಂದು ಸಮ್ಮೇಳನ ನಡೆಸಿದ್ದು, ಹೊರ ದೇಶದ ನೂರಾರು ಕನ್ನಡಿಗರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದು ಪ್ರಪ್ರಥಮವಾಗಿ ನಡೆದ ಬದಲಾವಣೆಯಾಗಿದೆ. ಹೊರದೇಶದವರನ್ನು ಏಕೆ ಕರೆಯಬೇಕಿತ್ತು. ವಿಶ್ವೇಶ್ವರಯ್ಯ ಅವರ ಮೊಮ್ಮಗಳನ್ನು ಏಕೆ ಕರೆತರಬೇಕು ಎಂದು ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರೊ.ಬಿ.ಜಯಪ್ರಕಾಶಗೌಡ, ಜಿ.ಟಿ.ವೀರಪ್ಪ, ಎಸ್.ಬಿ.ಶಂಕರಗೌಡ, ವ.ನಂ.ಶಿವರಾಮು, ಸತೀಶ್ ಜವರೇಗೌಡ ಸೇರಿದಂತೆ ಹಲವರು ಸಮ್ಮೇಳನದ ವಿರುದ್ಧ ಹಾಗೂ ಮಂಡ್ಯಕ್ಕೆ ಕಪ್ಪು ಚುಕ್ಕೆ ತರುವ ರೀತಿ ಮಾತನಾಡಿದ್ದು, ಅದು ಶೋಭೆ ತರುವಂತದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ಸುಜಾತಾಕೃಷ್ಣ, ಬಿ.ಎಂ.ಅಪ್ಪಾಜಪ್ಪ, ದರಸಗುಪ್ಪೆ ಧನಂಜಯ, ಮಂಜುನಾಥ ಬಲ್ಲೇನಹಳ್ಳಿ, ಚಿಕ್ಕತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net