

ಮಂಡ್ಯ: ಕನ್ನಡ ಪದ್ಯಗಳ ಹಾಡಿನ ಸೌಂದರ್ಯ ಶ್ರೀಮಂತವಾಗಿದೆ. ಹಾಡುಗಳು ಛಂದೋಗತಿಯನ್ನು ಹೊಂದಿವೆ. ಕನ್ನಡ ಸಾಹಿತಿಗಳು ರಚಿಸಿರುವ ಇಂತಹ ಸಾವಿರಾರು ಹಾಡುಗಳಿವೆ. ಅವುಗಳಲ್ಲಿ 100 ಹಾಡುಗಳನ್ನು ಆಯ್ಕೆ ಮಾಡಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಮೂಲಕ ಹಾಡಿಸುವುದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಕನ್ನಡ ಹಾಡುಗಳು ಮಾರ್ದನಿಸಲಿ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಲಹೆ ನೀಡಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಭಾಷಾ ಶಿಕ್ಷಕರು ಮತ್ತು ಉಪನ್ಯಾಸಕರಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವದ ಅರಿವು-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೆಲುಗಿನಂತೆ ಕನ್ನಡವೂ ಸಹ ಒಂದು ಸಂಗೀತದ ಭಾಷೆ. ಇದರಲ್ಲಿ ಒಂದು ಲಯವಿದೆ. ಕನ್ನಡದಲ್ಲಿ ಕನಿಷ್ಟ 5-6 ಸಾವಿರ ಲಯ ವಿನ್ಯಾಸಗಳಿವೆ. ಕನ್ನಡ ಅಧ್ಯಾಪಕರು ಉತ್ತಮ ಹಾಡುಗಳನ್ನು ಅಭ್ಯಾಸ ಮಾಡಿ ಮಕ್ಕಳಿಗೆ ಚಂದವಾಗಿ ಓದುವುದನ್ನು ಕಲಿಸಿ ನಂತರ ಸ್ಪರ್ಧೆ ನಡೆಸಿ ಆಯ್ಕೆ ಮಾಡಿ. ಕನ್ನಡ ಕವಿಗಳ ಹಲವಾರು ಪದ್ಯಗಳನ್ನು ಓದುವುದರ ಮೂಲಕ ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದ ಅವರು, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡ ಪದ್ಯ ಓದುವ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಇದರಿಂದ ಸಮ್ಮೇಳನಕ್ಕೆ ಪೂರಕವಾಗಿ ಕನ್ನಡ ವಾತಾವರಣ ನಿರ್ಮಾಣವಾಗುತ್ತದೆ. ವಿಜೇತರಾದವರಿಗೆ ಸಮ್ಮೇಳನದಲ್ಲಿ ಉತ್ತಮ ಬಹುಮಾನ ನೀಡಬೇಕು ಎಂದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕಸಾಪ ಜಿಲ್ಲಾ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಸಹಕಾರ್ಯದರ್ಶಿ ಬಸವೇಗೌಡ ಖರಡ್ಯ, ತಾಲೂಕು ಕಸಾಪ ಅಧ್ಯಕ್ಷ ಚಂದ್ರುಲಿಂಗು, ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಲೋಕೇಶ್ ಬೆಕ್ಕಳಲೆ, ಉಪನ್ಯಾಸಕ ಕೆ.ಪಿ.ಮೃತ್ಯುಂಜಯ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಮಾಜಿ ಕಾರ್ಯದರ್ಶಿ ಜಯರಾಮು, ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಇತರರಿದ್ದರು.