

ಕೋಲಾರ : ಕೋಲಾರ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.27 ಮತ್ತು 28ರಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸರಳವಾಗಿ ನಡೆಯಲಿದ್ದು, ಗೋಷ್ಠಿಗಳಿಗೆ ಒತ್ತು ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 75ಕ್ಕೂ ಹೆಚ್ಚು ಪುಸ್ತಕ ಬರೆದಿರುವ ಡಾ.ವಿ.ಮುನಿವೆಂಕಟಪ್ಪ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಮ್ಮೇಳನದ ಮಹಾದ್ವಾರಕ್ಕೆ ಜಿಲ್ಲೆಯ ಅಸ್ಮಿತೆಯಾಗಿರುವ ಶತಶೃಂಗ ಪರ್ವತ, ವೇದಿಕೆಗೆ ಕನ್ನಡಪರ ಹೋರಾಟಗಾರ ಚಿಕ್ಕಹನುಮಪ್ಪ ಹೆಸರಿಡಲಾಗಿದೆ. ಬೆಳಗ್ಗೆ 9ಕ್ಕೆ ಧ್ವಜಾರೋಹಣ, ನಂತರ ನಗರದ ಡಾ.ಬಿ.ಆರ್.ಅಂಬೇಡ್ಕರ್, ಗಾಂಧಿ ಹಾಗೂ ಸರ್ವಜ್ಞರ ಪ್ರತಿಮೆಗಳಿಗೆ ಮಾಲಾರ್ಪಣೆಯೊಂದಿಗೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಮೆರವಣಿಗೆ ಇರುವುದಿಲ್ಲ ಎಂದರು.
ಮೂರು ಪುಸ್ತಕ ಬಿಡುಗಡೆ: 11ಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಬಿ.ವಿ.ವಸಂತಕುಮಾರ್ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷರ ಬಹುಜನ ಚರಿತ್ರೆ ಮೂರು ಸಂಪುಟಗಳು ಸೇರಿ ಕಾ.ಹು.ಚಾನ್‌ಪಾಷಾ ಅವರ ಸಲೀಂ ಅವರ ಕತೆಗಳು, ರವೀಂದ್ರ ಅವರ ಯಕ್ಷಪ್ರಸಂಗ ಪುಸ್ತಕ ಬಿಡುಗಡೆಯಾಗಲಿದೆ ಎಂದರು. ಮಧ್ಯಾಹ್ನದ ಮೇಲೆ ನವ ಮಾಧ್ಯಮದಲ್ಲಿ ದಲಿತ ಸಾಹಿತ್ಯ ಕುರಿತು ಉಪನ್ಯಾಸ, ಸನ್ಮಾನ ಹಾಗೂ ಸಂಜೆ 5ಕ್ಕೆ ವಾದ್ಯಗೋಷ್ಠಿ, 6ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್ ರಚನೆಯ ತುಘಲಕ್ ನಾಟಕವನ್ನು ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಲಿದೆ ಎಂದರು.
ಜ.28ರಂದು : ಸಮ್ಮೇಳನದ ಸರ್ವಾಧ್ಯಕ್ಷರ ಬದುಕು, ಬರಹ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 11.30ಕ್ಕೆ 3ನೇ ಗೋಷ್ಠಿ, 2 ಗಂಟೆಗೆ ಕವಿಗೋಷ್ಠಿಯಲ್ಲಿ 40 ಕವಿಗಳು ಭಾಗವಹಿಸಲಿದ್ದಾರೆ. ಆಹಾರ ತಜ್ಞ ಆರ್.ರಾಜಶೇಖರ್ ಅವರಿಂದ ವಿಶೇಷ ಉಪನ್ಯಾಸ, ಸಂಜೆ 5ಕ್ಕೆ ಕಸಾಪ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ಸಮಾರೋಪ ನುಡಿಗಳನ್ನಾಡುವರು ಎಂದು ಹೇಳಿದರು. ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಆರ್.ವೆಂಕಟಸ್ವಾಮಿ, ಆರ್. ಅಶ್ವತ್ಥ್, ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ತಾಲೂಕು ಗೌರವಾಧ್ಯಕ್ಷ ಕೆ.ಎನ್. ಪರಮೇಶ್ವರನ್, ಗೌರವ ಕಾರ್ಯದರ್ಶಿ ಮುರಳಿ ಮೋಹನ್, ನಗರಾಧ್ಯಕ್ಷ ಬಿ. ಶಿವಕುಮಾರ್ ಗೋಷ್ಠಿಯಲ್ಲಿ ಹಾಜರಿದ್ದರು.
ನೋಂದಣಿ ಶುಲ್ಕ 50 ರೂ: ಸಮ್ಮೇಳನದ ನೋಂದಣಿ ಶುಲ್ಕ 50 ರೂ. ನಿಗದಿಪಡಿಸಲಾಗಿದ್ದು, 400 ಮಂದಿಗೆ ಮಿತಿಗೊಳಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಹಾಗೂ ಪಿಯು ಕಾಲೇಜು ಉಪನ್ಯಾಸಕರು, ಸಿಬ್ಬಂದಿಗೆ ಒಒಡಿ ಸೌಲಭ್ಯ ಒದಗಿಸಲಾಗಿದೆ. ಕೆಲ ಪುಸ್ತಕ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಊಟಕ್ಕೆ ಹಾಲಿಸ್ಟರ್ ಸ್ಮಾರಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.