

ಬಂಟ್ವಾಳ: ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 4 ಮತ್ತು 5ರಂದು ಮಂಚಿ-ಕೊಳ್ನಾಡು ಪ್ರೌಢಶಾಲೆ ಆವರಣದಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಬಿಡುಗಡೆಗೊಳಿಸಿದರು.
ಹಿರಿಯ ಸಾಹಿತಿ, ಪ್ರತಿಭಾನ್ವಿತ ಯುವ ಬರಹಗಾರರ, ಸಾಹಿತ್ಯ ಪ್ರಿಯರೆಲ್ಲರ ಸಾಹಿತ್ಯ ಜಾತ್ರೆಯಾಗಿ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೆರುಗು ನೀಡಲಿದೆ. ಕನ್ನಡ ಭಾಷೆಯ ಕೃಷಿಗೆ ಹೊಸ ರೂಪ, ಚಿಂತನೆ ಹುಟ್ಟು ಹಾಕುವ ‘ಸಾಹಿತ್ಯದಿಂದ ಸಾಮರಸ್ಯ’ ಎನ್ನುವ ಆಶಯದಡಿ ಈ ಸಮ್ಮೇಳನ ಜರುಗಲಿದೆ ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಆಳ್ವ ಇರಾ ಬಾಳಿಕೆ ಮಾತನಾಡಿ, ಗ್ರಾಮಾಂತರ ಮಂಚಿ ಪ್ರದೇಶ ಹಲವಾರು ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಮಂಚಿಯ ಇಬ್ಬರು ಸಾಹಿತಿಗಳು ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿರುವುದು ನಮಗೆ ಹೆಮ್ಮೆಯ ಸಂಗತಿ. ಮಂಚಿ-ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ, ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪಡಾರು ಮಹಾಬಲೇಶ್ವರ ಭಟ್ ಶುಭ ಹಾರೈಸಿದರು. ಶಾಲಾ ಹಳೇ ವಿದ್ಯಾರ್ಥಿ ಮಾಧವ ಮಾವೆ, ಅಬ್ದುಲ್ ರಝಾಕ್ ಅನಿಸಿಕೆ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕು ಘಟಕ ಪದಾಧಿಕಾರಿಗಳಾದ ವಿ.ಸು.ಭಟ್, ಅಬೂಬಕ್ಕರ್ ಅಮ್ಮುಂಜೆ, ಮಹಮ್ಮದ್ ಪಾಣೆಮಂಗಳೂರು, ಗಣೇಶ ಪ್ರಸಾದ ಪಾಂಡೇಲು, ಸಮಿತಿ ಕೋಶಾಧಿಕಾರಿ ಹಾಜಿ ಸುಲೈಮಾನ್ ಜಿ.ಸುರಿಬೈಲು, ಸಂಚಾಲಕರಾದ ಉಮಾನಾಥ ರೈ ಮೇರಾವು, ಬಿ.ಎಂ.ಅಬ್ಬಾಸ್ ಆಲಿ, ಪುಷ್ಪರಾಜ ಕುಕ್ಕಾಜೆ, ಮುಖ್ಯಶಿಕ್ಷಕಿ ಸುಶೀಲ ವಿಟ್ಲ ಉಪಸ್ಥಿತರಿದ್ದರು.
ಸಮ್ಮೇಳನ ಪೂರ್ವಭಾವಿ ಕೆಲಸ, ರೂಪುರೇಷೆ, ಯೋಜನೆ ಬಗ್ಗೆ ಚರ್ಚಿಸಲಾಯಿತು. ಸ್ವಾಗತ ಸಮಿತಿ 60 ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ ವಂದಿಸಿದರು. ಬಂಟ್ವಾಳ ತಾಲೂಕು ಘಟಕ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.