ನೆಲದ ಭಾಷೆಯೇ ನಮ್ಮ ಅಸ್ತಿತ್ವ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ವೈದೇಹಿ ಪ್ರತಿಪಾದನೆ

a
Published on

ಕೋಟ: ಸಾಹಿತ್ಯವೆಂಬುದು ಎಲ್ಲ ಮನಗಳ ತಟ್ಟುವ, ಎಲ್ಲರೊಡನೆಯೂ ಸಂವಾದಿಸುವ ಗುಣ ಹೊಂದಿದೆ. ಮನುಷ್ಯ ಲೋಕದ ವ್ಯವಹಾರವನ್ನೂ ಸಾಹಿತ್ಯ ಒಳಗೊಳ್ಳುತ್ತದೆ ಎಂದು ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಸಾಹಿತಿ ವೈದೇಹಿ ಹೇಳಿದರು.

ಸಾಸ್ತಾನ ಸಮೀಪ ಮಾಬುಕಳ ಚೇತನ ಪ್ರೌಢಶಾಲಾ ಬಿ. ಜಗಜೀವನದಾಸ ಶೆಟ್ಟಿ ಸ್ಮಾರಕ ರಂಗಮಂಟಪದ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಇರುವಂತಿಗೆ’ಯ ಅಧ್ಯಕ್ಷತೆ ವಹಿಸಿ ಅಧ್ಯಕ್ಷ ಭಾಷಣ ಮಾಡಿದರು. ಸೃಜನಶೀಲ ಪ್ರಕ್ರಿಯೆ ಅತ್ಯಂತ ವಿಚಿತ್ರ ಮತ್ತು ವಿಶಿಷ್ಟವಾದುದು. ಅಲ್ಲಿ ಚಂದ್ರನೆಂಬವ ಕೇವಲ ಗ್ರಹವಷ್ಟೇ ಅಲ್ಲ, ಎಲ್ಲದಕ್ಕೂ ಒಂದು ಜೀವವಿರುವ ಮಿಡಿತ ಇರುವ ಭಾವ ಕ್ಷೇತ್ರವದು. ಬೌದ್ಧಿಕ ಮೇಲಾಟವಿಲ್ಲದ, ಅತಿ ಭಾವುಕತೆಯಲ್ಲಿ ಮುಳುಗಿ ಹೋಗದ, ಶ್ರೇಷ್ಠತೆಯ ವ್ಯಸನ ಇರಕೂಡದ ಬುದ್ಧಿ ಭಾವ ಮತ್ತು ಹೃದಯಗಳ ಸಮ್ಮಿಶ್ರ ಪಾಕವದು. ಇದಕ್ಕೆ ಆಕರವಾಗಿ ಹಾಗೂ ವಾದಿ, ವಿವಾದಿ, ಸಂವಾದಿ, ಅನುವಾದಿಯಾಗಿ, ಚಿತ್ರಕಲೆ, ಸಿನಿಮಾ, ಸಂಗೀತ, ನೃತ್ಯ, ನಾಟಕ, ಜಾನಪದ ಇತ್ಯಾದಿಗಳು ಒದಗಿ ಬರುವವು ಎಂದರು.

ನಾವು ದಿನನಿತ್ಯ ಆಡುವ ಭಾಷೆ ತಾಯಿಯಂತೆ. ಅದರ ಅಸ್ತಿತ್ವದ ಅರಿವು ನಮಗೆ ಆಗುವುದೇ ಇಲ್ಲ. ನಮ್ಮದೇ ಆಗಿ ಬಿಟ್ಟಿರುವುದರ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ಬಹುಶಃ ನಾವು ತಪ್ಪಿ ಬೀಳುವುದು ಇಲ್ಲಿಯೇ. ನಮ್ಮ ಅನುಭವಗಳು ಭಾಷೆಯೊಂದಿಗೆ ಬೆಳೆಯುವುದರಿಂದ ಅದರ ಮಹಿಮೆ ಬಗ್ಗೆ ನಮಗೆ ಗಮನವಿರುವುದಿಲ್ಲ. ಆದರೆ ನಮ್ಮನ್ನು ನಾವಾಗಿ ಉಳಿಸುವ ಅಗೋಚರ ರಾಸಾಯನಿಕ, ನಮ್ಮ ಭಾಷೆ. ಅಕೃತ್ರಿಮವಾಗಿ ಮತ್ತು ಅಧಿಕೃತವಾಗಿ ನಮ್ಮ ಒಡಲನ್ನು ತಿಳಿಸಿಕೊಡುವ ಶಕ್ತಿ ಇರುವುದೂ ನಮ್ಮ ನೆಲದ ಭಾಷೆಗೆ ಮಾತ್ರ. ಅತಿ ಮೋಹಕ್ಕೂ ಒಳಗಾಗದೆ, ಕನ್ನಡ ಬಳಸುವ ವಿವೇಕ ನಮಗೆ ಆತ್ಮಸ್ಥೆರ್ಯ ನೀಡುತ್ತದೆ ಎಂದು ವೈದೇಹಿ ತಿಳಿಸಿದರು.

ಭಾಷೆಯ ಮೂಲಸ್ಥಾನಕ್ಕೆ ಧಕ್ಕೆ ಬಂದಿದೆ. ಹೆಚ್ಚು ಅವಕಾಶದ ಇನ್ನೊಂದರ ಅತಿಮೋಹದಲ್ಲಿ ನಮ್ಮದೇ ಭಾಷೆ ನಮಗೆ ಬೇಡವೆಂದರೆ ಒಟ್ಟಾರೆ ಇಲ್ಲಿ ಬಾಳಿ ಬದುಕಿದ ಮಂದಿ ಸಾವಿರಾರು ವರ್ಷಗಳಿಂದ ಸಾವಧಾನದಲ್ಲಿ ಕಟ್ಟಿಕೊಂಡು ಬಂದ ಒಂದು ಮಹಾನ್ ಪರಂಪರೆಯೇ ಬೇಡ, ನಮ್ಮ ಮಕ್ಕಳಿಗೆ ಸ್ವಂತ ನೆಲದ ಗಂಧವೇ ಬೇಡ, ನಮ್ಮ ರಂಗಭೂಮಿ, ಸಿನಿಮಾ, ಸಾಹಿತ್ಯ, ಸಂಗೀತ, ಕಾವ್ಯ, ಜನಪದ ಯಾವುದೂ ಬೇಡವೆಂದು ನಾವೇ ದೂರ ಮಾಡಿದರೆ ಹೇಗೇ? ಕಲೆ- ಸಾಹಿತ್ಯ ಎಂದರೆ ಒಂದು ರೀತಿಯಲ್ಲಿ ಸಮಾಜದ ಪ್ರಯೋಗಾಲಯ ಇದ್ದಂತೆ. ನವನವೀನ ಸಾಲುಗಳು, ಕಥೆ ಕಾವ್ಯ ನಾಟಕಗಳ ಮೂಲಕ ಮತ್ತೆ ಮತ್ತೆ ಸಮಾಜವನ್ನು ಅವು ಶೋಧಿಸುತ್ತವೆ. ಮನಸ್ಸಿನ ಗ್ರಹಿಕೆಯನ್ನೇ ಒಂದು ಉನ್ನತ ಸ್ಥಿತಿಗೊಯ್ಯವ ಪ್ರಕ್ರಿಯೆಯದು. ಮನಸ್ಸು ಆರೋಗ್ಯ ಪೂರ್ಣ ಆಕೃತಿ ಪಡೆಯುವುದು ಈ ಎಲ್ಲವೂ ಕೂಡಿಯೇ. ಮನಸ್ಸು ಕಟ್ಟುವ ಕೆಲಸ -ಮನೆ ಕಟ್ಟುವ, ಕಟ್ಟಡ ಕಟ್ಟುವ, ಸ್ಥಾವರವನ್ನು ಕಟ್ಟಿ ನಿಲ್ಲಿಸುವ ಕೆಲಸಕ್ಕಿಂತ ಭಿನ್ನ ಬಗೆಯದು. ಸಾಹಿತ್ಯಕ್ಕೆ ಮೂಲದ್ರವ್ಯವೇ ಇಟ್ಟಿಗೆಯಲ್ಲ; ಭಾಷೆ. ಅದು ಹಾಗೆಂದು ತಿಳಿಯದೆಯೇ ಸಹಜವಾಗಿ ನಾವು ಭಾಷೆಯಲ್ಲಿ ಬೆರೆತು ಹೋಗಿರುತ್ತೇವಷ್ಟೆ?

ಕಲೆ, ಸಾಹಿತ್ಯ, ಸಂಗೀತ ಯಾಕೆ? ಇದರಿಂದ ಏನು ಪ್ರಯೋಜನ? ಇಂಥ ಪ್ರಶ್ನೆಗಳು ಈಗ ಸಾಮಾನ್ಯವಾಗಿವೆ. ಹಿಂದೆ ಬದುಕೇ ಒಂದು ಹೋರಾಟವಾಗಿದ್ದರೆ ಇಂದು ನಾವು ಹೋರಾಡಬೇಕಾಗಿರುವುದು ಆ ಬದುಕನ್ನು ಅರ್ಥಪೂರ್ಣತೆಯಿಂದ ಉಳಿಸಿಕೊಳ್ಳುವುದಕ್ಕಾಗಿ. ನಮ್ಮ ಎಲ್ಲರಲ್ಲಿಯೂ ಒಬ್ಬ ಕಲಾವಿದ, ಕವಿ, ಬರಹಗಾರ, ಹೋರಾಟಗಾರನಿದ್ದಾನೆ. ಇವರನ್ನೆಲ್ಲ ಇಂದಿನ ಪರಿಸ್ಥಿತಿ ಮಣಿಸಲು ಯತ್ನಿಸುತ್ತಿದೆಯೇ? ಅದಕ್ಕೆ ಮಣಿಯದೆ ಸೆಟೆದು ಎದ್ದು ನಿಲ್ಲುವ ಬಗೆ, ಎದುರಿಸುವ ದಾರಿ ಯಾವುದು? ಇದು ಇಂದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ ಎಂದು ವೈದೇಹಿ ಸಮ್ಮೇಳನದ ಉದ್ದಕ್ಕೂ ಕನ್ನಡದ ಸಾಹಿತ್ಯದ ಕಂಪನ್ನು ಪಸರಿಸಿದರು.

ಒಗ್ಗಟ್ಟಿನ ಹೋರಾಟದಲ್ಲಿ ಯಶಸ್ಸು

ಸಮ್ಮೇಳನಕ್ಕೆ ಚಾಲನೆ ನೀಡಿ ಜಾನಕಿ ಹಂದೆ ಅಭಿಪ್ರಾಯ

ಪುರುಷರು - ಮಹಿಳೆಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದರಲ್ಲಿ ಭೇದ ಭಾವ ಸಲ್ಲದು. ಎಲ್ಲ ರಂಗದಲ್ಲೂ ಮಹಿಳೆಯರು ಇಂದು ಮುಂಚೂಣಿಯಲ್ಲಿದ್ದಾರೆ. ಒಗ್ಗಟ್ಟಿನ ಹೋರಾಟದಲ್ಲಿ ಯಶಸ್ಸು ಸಾಧ್ಯ. ಸಾಧನಾ ರಂಗದಲ್ಲಿ ಮಹಿಳೆಯರ ಪ್ರಾಬಲ್ಯ ಅತಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಮಹಿಳಾ ಸಾಧಕಿ ಹಂದಟ್ಟು ಜಾನಕಿ ಹಂದೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.

ಮಾಬುಕಳದ ಚೇತನ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರು ಕೃಷಿ ವಿ.ವಿ.ಯ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತ ಸಾಧಕಿ ಜ್ಯೋತಿ ಕುಲಾಲ್, ಸಾಹಿತಿ ಡಾ.ಬಿ. ಜನಾರ್ದನ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಂಸ್ಕೃತಿಕ ಚಿಂತಕ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಮಾಬುಕಳದ ಬಿ.ಡಿ. ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಬಿ. ಶೆಟ್ಟಿ, ತಾಲೂಕು ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರಾದ ಸೂರಾಲು ನಾರಾಯಣ ಮಡಿ, ಪುಂಡಲೀಕ ಮರಾಠೆ, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಡಾ.ಕಿಶೋರ್ ಕುಮಾರ್ ಶೆಟ್ಟಿ, ಪಿ.ವಿ ಆನಂದ್, ಸಾಹಿತಿಗಳಾದ ಡಾ.ನಿಕೇತನ, ಜ್ಯೋತಿ ಗುರುಪ್ರಸಾದ್, ಬಿ.ಒ.ಒ. ಆರ್. ಪ್ರಕಾಶ್, ಅಶೋಕ್ ಕಾಮತ್ ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು. ಚೇತನಾ ಪ್ರೌಢಶಾಲಾ ಮುಖ್ಯಶಿಕ್ಷಕ ಗಣೇಶ್ ಜಿ. ವಂದಿಸಿದರು.

ಕನ್ನಡ ಉಳಿಸುವುದಿದ್ದರೆ ಸಂಘ ಸಂಸ್ಥೆಗಳೇ ವಿನಃ ರಾಜಕಾರಣಿಗಳಲ್ಲ. ಸಮ್ಮೇಳನಕ್ಕೆ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ. ಪುಸ್ತಕ ಓದುವ ಹವ್ಯಾಸದಿಂದ ಅತಿ ಹೆಚ್ಚು ಮುದ್ರಣಕ್ಕೆ ಅವಕಾಶ ಕಲ್ಪಿಸಬೇಕು. ಶಾಲೆಯಲ್ಲಿ ಕನ್ನಡದ ಕಂಪನ್ನು ಪಸರಿಸಬೇಕು. ನಾವು ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತೇವೆ, ಅಲ್ಲಿ ಕನ್ನಡ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ನ್ಯಾಯಾಲಯದ ಆದೇಶ ಪಾಲನೆಯಾಗುವುದಿಲ್ಲ. ಎಲ್ಲ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತಾಗಬೇಕು. ಸಂಘ ಸಂಸ್ಥೆಗಳು ಮುಂದೆ ಬಂದು ಕನ್ನಡ ಉಳಿಸುವ ಕಾಯಕಲ್ಪ ಮಾಡಬೇಕು. ನಮ್ಮ ಮಾತೃಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net