

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬಹುಭಾಷಾ ವಿದ್ವಾಂಸ, ಸಂಶೋಧಕ, ತಮಿಳುನಾಡಿನ ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರನ್ನು ಕುಂಬಳೆ ಸಮೀಪದ ನಾರಾಯಣ ಮಂಗಲದಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕನ್ನಡ ಭಾಷೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ’ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದಂಗವಾಗಿ ಅಭಿನಂದನೆ ಆಯೋಜಿಸಲಾಗಿತ್ತು.
ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿ, ಹರಿಕೃಷ್ಣ ಭರಣ್ಯ, ಶ್ಯಾಮಲಾ ದಂಪತಿಯನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.
ಸಾಹಿತಿ, ನಿವೃತ್ತ ಅಧ್ಯಾಪಕ ವಿ.ಬಿ.ಕುಳಮರ್ವ ಅಭಿನಂದನಾ ಭಾಷಣ ಮಾಡಿ, ಕನ್ನಡ, ತುಳು, ತಮಿಳು, ಮಲಯಾಳಂ, ಹವಿಗನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಬಹುಭಾಷಾ ಪಂಡಿತರಾಗಿರುವ ಭರಣ್ಯ ಅವರು ಐವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಹವಿಗನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ವಕೀಲ ಥಾಮಸ್ ಡಿ.ಸೋಜ ಸೀತಾಂಗೋಳಿ, ಧರ್ಮತ್ತಡ್ಕ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ರವಿಲೋಚನ ಸಿ.ಎಚ್.ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.