

ಮಂಗಳೂರು: ಡಾ.ಅಮೃತ ಸೋಮೇಶ್ವರ ಅವರ ಸಾಹಿತ್ಯಕ ಮೌಲ್ಯ ಸಾರ್ವಕಾಲಿಕವಾದದ್ದು. ಅವುಗಳು ಕರಾವಳಿಯ ಸಾಂಸ್ಕೃತಿಕ ಸಾಕ್ಷಿಪ್ರಜ್ಞೆಯಾಗಿ ಉಳಿಯಲಿವೆ ಎಂದು ಜಾನಪದ ವಿದ್ವಾಂಸ ಡಾ.ಚಿನ್ನಪ್ಪಗೌಡ ಹೇಳಿದ್ದಾರೆ .
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಡಾ.ಅಮೃತ ಸೋಮೇಶ್ವರ ಅವರಿಗೆ ನುಡಿನಮನ ಸಲ್ಲಿಸಿದರು .
ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಅಮೃತ ಸೋಮೇಶ್ವರ ಸಾಹಿತ್ಯದ ಎಲ್ಲ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಅವರು ಬರೆಯದ ವಿಷಯವೇ ಇಲ್ಲ. ಬರೆಯುವ ವಿಷಯದಲ್ಲಿ ಅವರು ನಿಖರತೆ ಹೊಂದಿದ್ದರು. ತಮ್ಮ ಸ್ವಂತಿಕೆ ಹಾಗೂ ನಿಲುವನ್ನು ಬಿಟ್ಟುಕೊಡುತ್ತಿರಲಿಲ್ಲ. ಅವರ ಬರಹಗಳು ಯಾರ ಮನಸ್ಸನ್ನು ನೋಯಿಸುತ್ತಿರಲಿಲ್ಲ ಎಲ್ಲರಿಗೂ ಪ್ರಿಯವಾಗಿದ್ದವು ಮನಮುಟ್ಟುತ್ತಿದ್ದವು. ಪುರಾಣಕ್ಕೆ ಹೊಸ ಅರ್ಥ ,ಹೊಸ ರೂಪ ನೀಡಿದ ಅಪರೂಪದ ವ್ಯಕ್ತಿ ಎಂದು ಹೇಳಿದರು
ಪ್ರೊ.ಎ.ವಿ. ನಾವಡ ಮಾತನಾಡಿ, ಡಾ.ಅಮೃತ ಸೋಮೇಶ್ವರ ಅವರ ವ್ಯಕ್ತಿತ್ವ ಸದಾ ಮರೆಯಲಾಗದ್ದು. ಎಲ್ಲವನ್ನೂ ಒಪ್ಪಿಕೊಂಡು ರಾಜಿಯಾಗುವ ಮನೋಧರ್ಮ ಅವರದ್ದಾಗಿರಲಿಲ್ಲ. ಆದರೆ ಅವರ ನಿಲುವುಗಳು ಎಲ್ಲರಿಗೂ ಸೂಕ್ತ ಎಂದೆನಿಸುತ್ತಿತ್ತು. ತುಳು ಪಾಡ್ದನ ಸಂಪುಟದಂತಹ ಅವರ ಆಯ್ದ ಪುಸ್ತಕಗಳನ್ನು ಮರು ಪ್ರಕಟಿಸುವ ಅವಶ್ಯಕತೆ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ, ಅಮೃತ ಸೋಮೇಶ್ವರ ಮಹಾಶಕ್ತಿ. ತುಳು ಕನ್ನಡ ಮತ್ತು ಇತರ ಭಾಷೆಗಳಿಗೆ ಅವರ ಕೊಡುಗೆ ಅಪಾರ ಎಂದರು
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಸಮಿತಿಯ ಸದಸ್ಯರಾದ ಡಾ. ಮುರಲಿ ಮೋಹನ್ ಚೂಂತಾರು, ಹಿರಿಯರಾದ ಜಯಾನಂದ ಪೆರಾಜೆ, ಚಂದ್ರಶೇಖರ ನಾವಡ , ಅಮೃತ ಸೋಮೇಶ್ವರ ಅವರಿಗೆ ನುಡಿನಮನ ಸಲ್ಲಿಸಿದರು.