

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಡಿಸೆಂಬರ್ ತಿಂಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ಯಲ್ಲಿ ಮಂಗಳವಾರ ಸಭೆ ನಡೆಯಿತು.
ಜನವರಿಯಲ್ಲಿ ಸೈನಿಕರ ಹಾಗೂ ಫೆಬ್ರವರಿ ತಿಂಗಳಲ್ಲಿ ಶಿಕ್ಷಕರ ಸಮ್ಮೇಳನ ಆಯೋಜಿಸಲು ಉದ್ದೇಶಿಸಲಾಗಿದೆ. ತಾಲೂಕು ಘಟಕದಲ್ಲಿ ಆಗಿರುವ ದತ್ತಿನಿಧಿ ಕಾರ್ಯಕ್ರಮದ ವಿವರಗಳನ್ನು ತಾಲೂಕು ಅಧ್ಯಕ್ಷರು ತಕ್ಷಣ ಜಿಲ್ಲಾ ಘಟಕಕ್ಕೆ ತಲುಪಿಸ ಬೇಕೆಂದು ಅಧ್ಯಕ್ಷರು ಸೂಚಿಸಿ ದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಿಲ್ಲಾ, ತಾಲೂಕು ಹಾಗೂ ಹೋಬಳಿ ಘಟಕದಿಂದ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು.
ತಾಲೂಕು ಮಟ್ಟದ ಸಮ್ಮೇಳನ ಆಯೋಜಿಸುವ ಕುರಿತು ತಾಲೂಕು ಅಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ (ಮಡಿಕೇರಿ), ಎಸ್.ಡಿ. ವಿಜೇತ್ (ಸೋಮವಾರಪೇಟೆ), ಕೆ.ಎಸ್. ಮೂರ್ತಿ (ಕುಶಾಲನಗರ) ಮಾಹಿತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಖಜಾಂಚಿ ಜೋಯಪ್ಪ ಮತ್ತಿತರರು ಇದ್ದರು.