

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ಬೆಂಬಲಿಗರೊಂದಿಗೆ ಮಡಿಕೇರಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ತಹಸೀಲ್ದಾರ್ ಪಿ.ಎಸ್. ಮಹೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದಲ್ಲಿ 2,400 ಸದಸ್ಯರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಎಲ್ಲರ ಪರಿಷತ್ ಮಾಡುವ ಉದ್ದೇಶದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಕೇಶವ ಕಾಮತ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪರಿಷತ್ಗೆ ಭದ್ರ ಬುನಾದಿ ಹಾಕುವ ಕೆಲಸ ಮಾಡುತ್ತೇನೆ. ಹಿರಿಯರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಪ್ರಣಾಳಿಕೆ ಸಿದ್ಧ ಪಡಿಸಲಾಗುವುದೆಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷರಾದ ಕೆ.ಟಿ. ಬೇಬಿ ಮ್ಯಾಥ್ಯೂ, ಎಸ್.ಐ. ಮುನೀರ್ ಅಹಮ್ಮದ್, ಪ್ರಮುಖರಾದ ಬಿ.ಎನ್. ಪ್ರಕಾಶ್, ಚುಮ್ಮಿ ದೇವಯ್ಯ ಮತ್ತಿತರರು ಇದ್ದರು.