ಅಡಿಗರಿಗೆ ಮತ್ತೆ ಜಿಲ್ಲಾ ಕಸಾಪ ಪಟ್ಟ, ಸತತ 3ನೇ ಬಾರಿಗೆ ಗೆಲುವು

KASAPA
Published on

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗ ಸತತ ಮೂರನೇ ಬಾರಿಗೆ ವಿಜೇತರಾಗಿದ್ದಾರೆ. 2012-16ನೇ ಸಾಲಿನಲ್ಲಿ ಮೊದಲ ಬಾರಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ ಅಡಿಗ ಅವರು, 2016ರಲ್ಲಿ ಮರು ಆಯ್ಕೆಯಾಗಿದ್ದರು. ಅಡಿಗ 437, ಸುಬ್ರಹ್ಮಣ್ಯ ಬಾಸ್ರಿ 400, ಸುಬ್ರಹ್ಮಣ್ಯ ಭಟ್ 394 ಮತ ಪಡೆದಿದ್ದಾರೆ.
ಉಡುಪಿ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪು , ಬ್ರಹ್ಮಾವರ ತಹಸೀಲ್ದಾರ್ ಕಚೇರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸೇರಿ ಒಟ್ಟು 8 ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4ರ ವರೆಗೆ ಚುನಾವಣೆ ನಡೆಯಿತು.
ಜಿಲ್ಲೆಯಲ್ಲಿ 1987ಮತದಾರರಿದ್ದು, ಶೇ. 62ರಷ್ಟು ಮತದಾನವಾಗಿದ್ದು, 1232 ಮಂದಿ ಮತ ಚಲಾಯಿಸಿದ್ದರು. ಹೆಬ್ರಿ 135ರಲ್ಲಿ ಹೆಬ್ರಿ 110, ಬೈಂದೂರು 254ರಲ್ಲಿ 176, ಉಡುಪಿ 451ರಲ್ಲಿ 235, ಕಾರ್ಕಳ 134ರಲ್ಲಿ 88, ಕುಂದಾಪುರ 435ರಲ್ಲಿ 240, ಬ್ರಹ್ಮಾವರ 140ರಲ್ಲಿ 91, ಕೋಟ ಹೋಬಳಿ 302ರಲ್ಲಿ 216, ಕಾಪುವಿನಲ್ಲಿ 136ರಲ್ಲಿ 76 ಮಂದಿ ಮತದಾನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣದೊಂದಿಗೆ ನಿರಂತರ ಸಾಹಿತ್ಯ ಚಟುವಟಿಕೆ ನಡೆಯುವಂತೆ ಮಾಡುವುದು ನನ್ನ ಸಂಕಲ್ಪ. ಹಿಂದಿನ ಅವಧಿಯಲ್ಲಿ ರೂಪಿಸಿದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ಕುಂದಾಪುರ ಕನ್ನಡಕ್ಕೆ ಒತ್ತು ನೀಡುವ ಕಾರ್ಯ ಮಾಡಲಾಗುವುದು. 5 ವರ್ಷದ ಅವಧಿಯಲ್ಲಿ ಒಂದು ಬಾರಿಯಾದರೂ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಇರಾದೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಜಿಲ್ಲೆಯವರೇ ಆಗಿರುವುದರಿಂದ ಕನ್ನಡದ ಕಾರ್ಯಕ್ಕೆ ಹೆಚ್ಚಿನ ಬೆಂಬಲ ಲಭಿಸಲಿದೆ. | ನೀಲಾವರ ಸುರೇಂದ್ರ ಅಡಿಗ ಕಸಾಪ ಜಿಲ್ಲಾಧ್ಯಕ್ಷ

ದಕ್ಷಿಣ ಕನ್ನಡದಲ್ಲಿ ಎಂ.ಪಿ.ಶ್ರೀನಾಥ್ ಗೆಲುವು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಎಂ.ಪಿ. ಶ್ರೀನಾಥ್ ಆಯ್ಕೆಯಾದರು. ಜಿಲ್ಲೆಯಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಉಪನ್ಯಾಸಕ ಶ್ರೀನಾಥ್ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ಸ್ಪರ್ಧಿಸಿದ್ದರು.

ಶ್ರೀನಾಥ್ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 26 ವರ್ಷಗಳಿಂದ ಕನ್ನಡ ಉಪನ್ಯಾಸಕರು. ದ.ಕ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ 2008ರಿಂದ 2021ರವರೆಗೂ ಸೇವೆ ಸಲ್ಲಿಸಿದ್ದರು. ವಿವಿಧ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಸಮಿತಿಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ 10 ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ವಿವಿಧ ತುಳು ಸಾಹಿತ್ಯ, ಜಾನಪದ, ಕಂಬಳ ಸಮಿತಿಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಮಿತಿ ಕಾರ್ಯದರ್ಶಿಯಾಗಿದ್ದರು. ಕಯ್ಯರ ಕಿಞ್ಞಣ್ಣ ರೈ ಬದುಕು ಮತ್ತು ಬರೆಹ ಹಾಗೂ ಶಿಕಾರಿ ಮತ್ತು ಬಂಡಾಯ -ಹೊಸ ಓದು’ ಎಂಬ ಕೃತಿ ರಚಿಸಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಬಸವ ಕೇಂದ್ರ ಮುರುಘಾ ಮಠ ಇವರಿಂದ ಶಿಕ್ಷಕ ರತ್ನ ಪ್ರಶಸ್ತಿ, ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net