

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ (ಕಸಾಪ) ನಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ‘ಸಂತ ಶಿಶುನಾಳ ಶರೀಫ ಮತ್ತು ಕಳಸದ ಗೋವಿಂದ ಭಟ್ಟರ’ ದತ್ತಿ ಪ್ರಶಸ್ತಿಗೆ ಯಜಮಾನ್ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಶ್ರೀಹರಿ ಖೋಡೆ ಅವರು ಸ್ಥಾಪಿಸಿದ ಯಜಮಾನ್ ಎಂಟರ್ ಪ್ರೈಸಸ್ ‘ಈಶ್ವರ ಅಲ್ಲ, ನೀನೆ ಎಲ್ಲಾ’ ಧಾರಾವಾಹಿ ನಿರ್ಮಿಸುವ ಮೂಲಕ ಸಂತ ಶಿಶುನಾಳ ಶರೀರ ಜೀವನ ಮತ್ತು ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದಲ್ಲದೆ ಶ್ರೀಹರಿ ಖೋಡೆ ಅವರು ಉದ್ಯಮಿಯಾಗಿ ಮಾತ್ರವಲ್ಲದೆ ಅಧ್ಯಾತ್ಮ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದವರು.ಯಜಮಾನ್ ಎಂಟರ್ ಪ್ರೈಸಸ್ ಮೂಲಕ ಹಲವು ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದವರು. ಹಾಗಾಗಿ ಈ ಸಂದರ್ಭದಲ್ಲಿ ಶ್ರೀಹರಿ ಖೋಡೆ ಅವರನ್ನು ಸ್ಮರಿಸುತ್ತ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರ ಹೆಸರಿನಲ್ಲಿ 10 ಲಕ್ಷ ರೂ. ಮೊತ್ತದ ಒಂದು ದತ್ತಿ ಮತ್ತು ಜಾತಿಮತಗಳ ಮೀರಿ ಭಾವೈಕ್ಯತೆಯನ್ನು ಸಾರಿದ ಸಂತ ಶಶಿನಾಳ ಶರೀಫರು ಮತ್ತು ಅವರ ಗುರುಗಳಾದ ಗುರು ಗೋವಿಂದ ಭಟ್ಟರ ಹೆಸರಿನಲ್ಲಿ 10 ಲಕ್ಷ ರೂ. ಮೊತ್ತದ ದತ್ತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಶೀಘ್ರದಲ್ಲೇ ಡಾ. ದೊಡ್ಡರಂಗೇಗೌಡರ ಹೆಸರಿನ ದತ್ತಿಗೆ ಪುರಸ್ಕೃತರ ಆಯ್ಕೆ ಮಾಡಲಾಗುವುದು ಎಂದು ಪರಿಷತ್ತು ತಿಳಿಸಿದೆ.