

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ತಮ್ಮ ಆಜೀವ ಸದಸ್ಯತ್ವವನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಲೇಖಕಿ ಡಾ. ವಸುಂಧರಾ ಭೂಪತಿ ಅವರು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಮತ್ತು ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಿರುದ್ಧ ಮಹಿಳಾ ಆಯೋಗಕ್ಕೆ ನೀಡಿದ್ದ ದೂರಿನನ್ವಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಹಕಾರ ಇಲಾಖೆ ಮುಖಸ್ಥರಿಗೆ ಮುಂದಿನ ಕ್ರಮಕೈಗೊಳ್ಳುವಂತೆ ಆಯೋಗವು ಪತ್ರ ಬರೆದಿದೆ.
ಕಸಾಪ ಆಜೀವ ಸದಸ್ಯತ್ವವನ್ನು ಅಮಾನತುಗೊಳಿಸುವ ಮೂಲಕ ನನ್ನ ಗೌರವಕ್ಕೆ ಧಕ್ಕೆ ತರಲಾಗಿದೆ. ಇದ್ಕಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿದ್ದರು. ಜತೆಗೆ ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು.
ಕಸಾಪ ಅಧ್ಯಕ್ಷರ ಸಂವಿಧಾನಬಾಹಿರ ನಡೆ ಕುರಿತ ಕನ್ನಡ ನಾಡು- ನುಡಿ ಜಾಗೃತಿ ವೇದಿಕೆಯಿಂದ ಸಹಕಾರ ಇಲಾಖೆಗೆ ದೂರು ನೀಡಿದ್ದೇವೆ. ಆ ದೂರಿನ ಅನ್ವಯ ತನಿಖೆ ಆರಂಭವಾಗಿದೆ. ಕಸಾಪ ಅಧ್ಯಕ್ಷರು ನಾವು ಎತ್ತಿರುವ ಹಕ್ಕಿನ ಪ್ರಶ್ನೆಗಳಿಗೆ ಉತ್ತರ ನೀಡದೆ ನನ್ನ ಆಜೀವ ಸದಸ್ಯತ್ವವನ್ನೇ ಅಮಾನ್ಯಗೊಳಿಸಿ, ನನ್ನ ಮೇಲೆ ವಿಚಾರಣೆಗೆ ಪತ್ರ ಬರೆದಿದ್ದಾರೆ. ಆದರೆ ಈ ಅಮಾನತು ಕ್ರಮವನ್ನು ಸಹಕಾರ ಇಲಾಖೆ ರದ್ದುಪಡಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಮಗೆ ನ್ಯಾಯ ದೊರಕಿಸಿಕೊಡಬೇಕಾಗಿ ದೂರಿನಲ್ಲಿ ಕೋರಿದ್ದರು.