

ಬೆಂಗಳೂರು: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳ ಕುರಿತು ಆಮೂಲಾಗ್ರ ತನಿಖೆಗೆ ಲೋಕಾಯುಕ್ತಕ್ಕೆ ಮನವಿ ಮಾಡಲು ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತ ನಿರ್ಧಾರ ಕೈಗೊಂಡಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿನ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಲ್ಲಿ ಸಮ್ಮೇಳನದ ಖರ್ಚು ವೆಚ್ಚಗಳ ಕುರಿತು ಲೋಕಾಯುಕ್ತದಿಂದ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಮಂಡ್ಯದಲ್ಲಿ ನಡೆದ 87ನೇ ಸಮ್ಮೇಳನಕ್ಕೆ ಸರ್ಕಾರವು ಮಂಡ್ಯ ಜಿಲ್ಲಾಡಳಿತಕ್ಕೆ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಡಳಿತದಿಂದ 2.5 ಕೋಟಿ ರೂ. ಪಡೆದಿತ್ತು. ಉಳಿದ 27.5 ಕೋಟಿ ರೂ. ಮಂಡ್ಯ ಜಿಲ್ಲಾಡಳಿತವೇ ನಿರ್ವಹಿಸಿದೆ. ಆದರೆ, ಸಮ್ಮೇಳನದಲ್ಲಿ ವೇದಿಕೆ, ಆಹಾರ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಮಿಯಾನ ಸೇರಿ ಪೊರಕೆ ಖರೀದಿವರೆಗೂ ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪರಿಷತ್ತು ಈ ನಿರ್ಧಾರ ಕೈಗೊಂಡಿದೆ.