ರೈತನ ಬದುಕು ಚರ್ಚೆಯಾಗಲಿ,  ಜಾನಪದ ವಿವಿ ಕುಲಪತಿ ಡಾ. ಭಾಸ್ಕರ ಸಲಹೆ,  ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

img_1742483348756_1-1.jpg
Published on

ಹುಬ್ಬಳ್ಳಿ: ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಚಲಿತ ಸಮಸ್ಯೆಗಳಾದ ರೈತರ ಸಾವು, ಬದುಕಿನ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು, ಪರಿಹಾರಗಳನ್ನು ಕಂಡುಕೊಳ್ಳಬೇಕು, ಕನ್ನಡವು ಆತ್ಮದ ಭಾಷೆಯಾಗಿ ಬದುಕಿಗೆ ಆಸರೆಯಾಗುತ್ತದೆಯೋ ಇಲ್ಲವೋ? ಎಂಬುದರ ಮೇಲೆ ಬೆಳಕು ಚೆಲ್ಲಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಎಂ. ಭಾಸ್ಕರ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ನಗರ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ರೈತನ ನೆಮ್ಮದಿಗಾಗಿ ನಾವೆಲ್ಲ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರಬೇಕು. ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿರುವ ಮಹಾತ್ಮ ಬಸವೇಶ್ವರರು ಹಾಗೂ ಬುದ್ಧ ಹೇಳಿರುವ ತತ್ವಗಳ ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ. ಸಮತಾವಾದದ ಮೇಲೆ ಸಮಾಜ ಕಟ್ಟಬೇಕು. ರಾಜ್ಯದಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವ ಮಠ ಮಾನ್ಯಗಳನ್ನು ಗೌರವಿಸಬೇಕು ಎಂದು ಹೇಳಿದರು.

ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ, ಜಾನಪದ ಪರಿಷತ್ ಅಧ್ಯಕ್ಷ ಡಾ. ಎಸ್. ಬಾಲಾಜಿ, ಮಲ್ಲಿಕಾರ್ಜುನ ಸಾವಕಾರ, ಪ್ರೊ. ಜಿ.ಬಿ. ಹಳ್ಳಾಳ, ಡಾ. ಎಚ್.ವಿ. ಬೆಳಗಲಿ, ಇತರರು ಪಾಲ್ಗೊಂಡಿದ್ದರು.

ಎಸ್.ಕೆ. ಆದಪ್ಪನವರ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ವಿದ್ಯಾ ವಂಟಮೂರಿ ವಂದಿಸಿದರು.

ಕವಿಗೋಷ್ಠಿ: ಸಮ್ಮೇಳನದ ಪ್ರಮುಖ ಭಾಗ ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಜನರು ಕವನ ವಾಚನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾಂತಪ್ಪ ನಂದೂರ ಮಾತನಾಡಿ, ಕವಿ ಎಂದರೆ ಭಾವಜೀವಿ, ಭಾವಕೋಶ ವಿಸ್ತರಿಸಿದಾಗ ಒಳ್ಳೆಯ ಕವಿತೆ ಹೊರಹೊಮ್ಮುತ್ತದೆ. ಭಾವ, ಪ್ರೀತಿ, ನಿಸರ್ಗ, ಆನಂದ ಈ ಎಲ್ಲದರ ಮಿಶ್ರಣವಾದಾಗಲೇ ಕವಿ ಹೃದಯ ಮಿಡಿದು ಪದಗಳಾಗುತ್ತವೆ ಎಂದರು.

ಸರ್ವಾಧ್ಯಕ್ಷರೊಂದಿಗೆ ಸಂವಾದ : ಕನ್ನಡವು ಅನ್ನದ ಭಾಷೆಯಾಗಬೇಕಾದರೆ ಮುಖ್ಯವಾಗಿ ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಕರ್ನಾಟಕಕ್ಕೆ ಬರುವ ಎಂಎನ್ ಸಿಗಳಿಗೆ ಕನ್ನಡಿಗರಿಗೆ ಮೀಸಲಾತಿ ನೀಡುವ ಕರಾರು ಹಾಕಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು.

ಸರ್ವಾಧ್ಯಕ್ಷರೊಂದಿಗೆ ಸಂವಾದದಲ್ಲಿ ರೈಲ್ವೆ ಇಲಾಖೆಯ ಕನ್ನಡ ಸಂದ ಸಿ.ಎಂ. ಮುನಿಸ್ವಾಮಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ಬ್ರಿಟಿಷರು ದಟ್ಟ ಕಾನನ ಮಧ್ಯೆಯೇ ರೈಲು ಹಳಿ ಹಾಕಿದ್ದರು. ಈಗಿನ ಸರ್ಕಾರಗಳಿಗೆ ಹುಬ್ಬಳ್ಳಿ ಅಂಕೋಲಾ ಮಧ್ಯೆ ರೈಲು ಸೇವೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಲಾಲೂ ಪ್ರಸಾದ ಯಾದವ ಅವರು ರೈಲ್ವೆ ಮಂತ್ರಿಯಾಗಿದ್ದಾಗ ದೇಶದ ಎಲ್ಲ ಕಡೆ ಬಿಹಾರಿಗಳು ನೇಮಕವಾದರು. ರಾಜ್ಯದ ಎಷ್ಟೋ ಜನರು ಮಂತ್ರಿಯಾದರೂ ರೈಲ್ವೆ ನೇಮಕಾತಿಯು ಕನ್ನಡಿಗರಿಗೆ ಸರಳವಾಗುವಂತೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಾ. ಮಹೇಶ ಹೊರಕೇರಿ, ಈರಣ್ಣ ಹೂಲಿ, ವೀರೇಶ ಹಂಡಗಿ, ಲಿಂಗರಾಜ ರಾಮಾಪುರ, ರಮಜಾನ ಕಿಲ್ಲೇದಾರ ಮುಂತಾದವರು ವಿವಿಧ ವಿಷಯಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿ ಉತ್ತರ ಕಂಡುಕೊಂಡರು. ಡಾ. ಸುರೇಶ ಹೊರಕೇರಿ ಸ್ವಾಗತಿಸಿದರು. ಮೃತ್ಯುಂಜಯ ಮಟ್ಟಿ ವಂದಿಸಿದರು.

ಸಮ್ಮೇಳನದ ನಿರ್ಣಯಗಳು: ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಸುವುದಕ್ಕೆ ಒತ್ತು ಕೊಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ಶುದ್ಧತೆಗೆ ಗಮನ ಕೊಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net