ಕನ್ನಡಿಗರ ಅಸ್ಮಿತೆಯಾದ ಅಧಿಕೃತ ಭಾವಚಿತ್ರ: ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿಕೆ

29_11_Mdy_01(Prabanda Sparde)
Published on

ಮಂಡ್ಯ: ರಾಜ್ಯ ಸರ್ಕಾರದಿಂದ ಕನ್ನಡಾಂಬೆಯ ಅಧಿಕೃತ ಭಾವಚಿತ್ರ ರೂಪುಗೊಂಡು ಘೋಷಣೆಯಾಗುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದ ತಾವರಗೆರೆಯ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕದಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ರಾಜ್ಯ ಸರ್ಕಾರವು ಕರ್ನಾಟಕದ ಸಾಂಪ್ರದಾಯಿಕ ಕಲೆ ಬಿಂಬಿಸುವ ಹಾಗೂ ನಾಡಗೀತೆ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿ ಕನ್ನಡಾಂಬೆಯ ಅಧಿಕೃತ ಭಾವಚಿತ್ರಕ್ಕೆ ಹೊಸರೂಪ ಕಟ್ಟಿಕೊಟ್ಟಿರುವುದು ಕನ್ನಡಿಗರ ಅಸ್ಮಿತೆಯಾಗಿದೆ ಎಂದು ನುಡಿದರು.

ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸುವ ಕನ್ನಡ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ನಾಡದೇವಿ ಭುವನೇಶ್ವರಿಯ ಚಿತ್ರವನ್ನು ವಿವಿಧ ರೀತಿಯಲ್ಲಿ ಬಳಸಲಾಗಿದೆ. ಕನ್ನಡಾಂಬೆಗೆ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ರಾಜ್ಯ ಸರ್ಕಾರವು ತಜ್ಞ ಕಲಾವಿದರ ಸಮಿತಿ ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕರ್ನಾಟಕ ಮಾತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಸಲಹೆಗಾರ ಎಂ.ಗುರುಪ್ರಸಾದ್ ಮಾತನಾಡಿ, ಕನ್ನಡಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಭಾಷೆ ಕಟ್ಟುವ ನಿಟ್ಟಿನಲ್ಲಿ ಸಾಹಿತಿ, ರಾಜಮನೆತನ, ಅನುಭವ ಮಂಟಪದ ದಿಗ್ಗಜರು ಹೋರಾಟ ಮಾಡಿರುವುದು ಅವಿಸ್ಮರಣೀಯ ಎಂದು ನುಡಿದರು.

ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ, ವೇದಿಕೆ ಅಧ್ಯಕ್ಷ ಪೋತೇರ ಮಹದೇವು, ಸಹಕಾರ ರತ್ನ ಪುರಸ್ಕೃತ ಕೀಲಾರ ಕೃಷ್ಣ, ಶಾಲೆಯ ಕಾರ್ಯದರ್ಶಿ ಕೆ.ಪಿ.ಮಂಜುಳಾ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅಂತೆಯೇ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net