

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಿಂದ ಸೆ.22ರಂದು ಹೊರಟ ‘ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ’ 19 ಜಿಲ್ಲೆಗಳ ಮೂಲಕ ಸಾಗಿ ಬಂದಿದ್ದು ಇದೀಗ ಉಡುಪಿಯಿಂದ ದ.ಕ. ಜಿಲ್ಲೆಗಾಗಮಿಸಿದೆ. ಇಲ್ಲಿಂದ ಹತ್ತು ಜಿಲ್ಲೆಗಳ ಮೂಲಕ ಹಾದು ಸಮ್ಮೇಳನದ ಸಂದರ್ಭ ಮಂಡ್ಯ ತಲುಪಲಿದೆ.
ಗುರುವಾರ ಬೆಳಗ್ಗೆ ಕಾರ್ಕಳದ ಚಿಲಿಂಬಿಯಲ್ಲಿ ಕಾರ್ಕಳ ತಾಲೂಕು ಕ.ಸಾ.ಪ. ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ ಅವರು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ಬೆಳುವಾಯಿ ಗ್ರಾಪಂ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಪಿಡಿಒ ಭೀಮ ನಾಯಕ್, ಕ.ಸಾ.ಪ. ಮೂಡುಬಿದಿರೆ ಘಟಕದ ಪದಾಧಿಕಾರಿಗಳಾದ ಸದಾನಂದ ನಾರಾವಿ, ರಾಜವರ್ಮ ಬೈಲಂಗಡಿ, ಆಂಡಾರು ಗುಣಪಾಲ ಹೆಗ್ಡೆ, ಯತಿರಾಜ್ ಶೆಟ್ಟಿ ಮೊದಲಾದವರ ಉಪಸ್ಥಿತಿಯಲ್ಲಿ ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ರಥವನ್ನು ಬೀಳ್ಕೊಟ್ಟರು.
ಬೆಳುವಾಯಿಯಿಂದ ಮೂಡುಬಿದಿರೆಗೆ ಆಗಮಿಸಿದ ರಥವನ್ನು ತಾಲೂಕು ಆಡಳಿತ ಸೌಧದ ಎದುರು ಪ್ರಮುಖರು ಸ್ವಾಗತಿಸಿ ಬರಮಾಡಿಕೊಂಡರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ., ಉಪತಹಸೀಲ್ದಾರ್ ಬಾಲಚಂದ್ರ, ರಾಮ ಕೆ., ತಿಲಕ್, ಕ್ಷೇತ್ರ ಶಿಕ್ಷಣ ಅಧಿಕಾರಿ ವಿರೂಪಾಕ್ಷಪ್ಪ, ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಮುಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಭುವನೇಶ್ವರಿಯ ವಿಗ್ರಹಕ್ಕೆ ಮಾಲಾರ್ಪಣೆಗೈದರು.
ಮುಂದಿನ ತಿಂಗಳಲ್ಲಿ 20ರಿಂದ 22ರವರೆಗೆ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ, ಗ್ರಾಮ ಗ್ರಾಮಗಳಿಂದ ಕನ್ನಡಿಗರು ಆಗಮಿಸಿ ಸಮ್ಮೇಳನದ ಯಶಸ್ಸಿನಲ್ಲಿ ಕೈ ಜೋಡಿಸಬೇಕಾಗಿದೆ. ಗ್ರಾಮ ಗ್ರಾಮಗಳಲ್ಲಿ ಕನ್ನಡಿಗರನ್ನು ಸ್ವಾಗತಿಸಲು ಪೂರಕ ವಾತಾವರಣ ನಿರ್ಮಿಸುವುದೇ ಈ ರಥಯಾತ್ರೆ ಉದ್ದೇಶ ಎಂದು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ತಿಳಿಸಿದರು.
ವಾಣಿಜ್ಯ ತೆರಿಗೆ ಮತ್ತಿತರ ಇಲಾಖಾಧಿಕಾರಿಗಳು, ಸಿಬ್ಬಂದಿ, ವಿವಿಧ ವಿದ್ಯಾಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಮೂಡುಬಿದಿರೆ ಕಸಾಪ ಪದಾಧಿಕಾರಿಗಳು, ಸದಸ್ಯರು ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆಗೈದು ನಮಿಸಿದರು. ಬಳಿಕ ರಥವು ಮಂಗಳೂರಿನತ್ತ ಚಲಿಸಿತು.