

ಹೊನ್ನಾಳಿ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದ್ದು, 25ಕ್ಕೆ ಹೊನ್ನಾಳಿಗೆ ಆಗಮಿಸಲಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.
ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕನ್ನಡ ರಥಯಾತ್ರೆ ಸ್ವಾಗತಿಸುವ ಹಾಗೂ ನ. 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯದಲ್ಲಿ ಡಿಸೆಂಬರ್ 20, 21, ಮತ್ತು 22ರಂದು 3 ದಿನಗಳ ಕಾಲ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ಅ. 24ರಂದು ಹಾವೇರಿ ಮೂಲಕವಾಗಿ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಬರಲಿದೆ. ಅ. 25ರಂದು ಚನ್ನಗಿರಿ ಮೂಲಕ ಹೊನ್ನಾಳಿಗೆ ಆಗಮಿಸಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ದೇವನಾಯಕನಹಳ್ಳಿ ಕನಕದಾಸ ವೃತ್ತದಲ್ಲಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.
ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು, ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ರಥಯಾತ್ರೆಯು ನಗರದಲ್ಲಿ ಮೆರವಣಿಗೆ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಹಿರೇಮಠ ಸರ್ಕಲ್, ಎಪಿಎಂಸಿ, ಎಚ್. ಕಡದಕಟ್ಟೆ ಕೈಮರದವರೆಗೂ ಹೋಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಬೀಳ್ಕೊಡಬೇಕಾಗಿದೆ ಎಂದರು.
ರಥಯಾತ್ರೆ ಸಾಗುವ ಮಾರ್ಗದಲ್ಲಿ ಸ್ವಚ್ಛತೆ ಜತೆಗೆ ತಳಿರು ತೋರಣಗಳಿಂದ ಅಲಂಕಾರ ಮಾಡಬೇಕು. ಅದಕ್ಕಾಗಿ ಪುರಸಭೆ ಅಧಿಕಾರಿ, ಸಿಬ್ಬಂದಿ ತೊಡಗಿಸಿಕೊಳ್ಳಬೇಕು ಎಂದರು.