

ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯ ತಾಯಿ ಕನ್ನಡ ಭುವನೇಶ್ವರಿ ದೇವಾಲಯದಿಂದ ಜ್ಯೋತಿ ಹಿಡಿದು ಸಾಗಿರುವ ಕನ್ನಡ ರಥಯಾತ್ರೆಯು ಇಂದು(ಡಿ.15) ಬೆಂಗಳೂರು ಪ್ರವೇಶಿಸಿದ್ದು, ನಾಳೆ(ಶುಕ್ರವಾರ) ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಕಚೇರಿ ಆವರಣದಲ್ಲಿ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಗುವುದು. ನಂತರ ಜಾನಪದ ಕಲಾಮೇಳಗಳೊಂದಿಗೆ ಕನ್ನಡ ರಥ ಜಾಥಾ ನಗರಸಂಚಾರ ನಡೆಸಲಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಸಾರಿಗೆ ಸಚಿವ ಶ್ರೀರಾಮಲು, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷ ಡಾ. ದೊಡ್ಡರಂಗೇಗೌಡ ಸೇರಿ ಹಲವು ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಕನ್ನಡ ರಥವು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಜ್ಯೋತಿಯೊಂದಿಗೆ ಜ.6ರಂದು ಹಾವೇರಿ ತಲುಪಲಿದ್ದು, ಆ ಜ್ಯೋತಿಯಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.