

ಮೈಸೂರು: ಸಾಕಷ್ಟು ಜನರು ಕನ್ನಡವನ್ನು ದೋಷಪೂರ್ಣವಾಗಿ ಬಳಕೆ ಮಾಡುತ್ತಿದ್ದಾರೆ. ಜನರು ಕನ್ನಡವನ್ನು ತಪ್ಪಾಗಿ ಮಾತನಾಡಲು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣದ ದೋಷವೇ ಕಾರಣ ಎಂಬುದು ಕಹಿಯಾದ ಸತ್ಯ ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಬುಧವಾರದ ಕನ್ನಡ ಭಾಷಾ ಶಿಕ್ಷಕರ ಭಾಷಾ ಬಲವರ್ದನೆಗಾಗಿ ಆಯೋಜಿಸಿದ್ದ ಶಿಕ್ಷಕರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ತಪ್ಪು ತಪ್ಪಾಗಿ ಕನ್ನಡ ಮಾತನಾಡಲು ಕನ್ನಡದ ಶಿಕ್ಷಕರೇ ಕಾರಣ. ಈ ಮಾತು ಕೇಳಿ ನಿಮಗೆ ನೋವಾಗಬಹುದು. ಈ ನೋವ ನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಎಲ್ಲರು ಕನ್ನಡವನ್ನು ಸರಿಯಾಗಿ ಮಾತನಾಡುವಂತೆ ಮಾಡಬೇಕಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಹಾಗಾಗಿ ಕನ್ನಡವನ್ನು ಉಳಿಸುವ ಹಾಗೂ ಬೆಳೆಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ನೀವು ಒಳ್ಳೆಯ ಬೋಧನೆ ಮಾಡಬೇಕಾದರೆ ನಿಮ್ಮ ಬಳಿ ಕನ್ನಡ ನಿಘಂಟು ಇರಬೇಕು. ತರಗತಿಗೆ ತೆರಳುವಾಗ ನಿಘಂಟಿನೊಂದಿಗೆ ತೆರಳಿ. ಆದರೆ, ಬಹುತೇಕರು ಕನ್ನಡ ಶಿಕ್ಷಕರು ಕನ್ನಡ ನಿಘಂಟು ಹೊಂದಿಲ್ಲ. ಶಾಲೆಯಲ್ಲಿರುವ ನಿಘಂಟನ್ನು ಸಹ ತೆರೆದು ನೋಡುತ್ತಿಲ್ಲ. ಶಿಕ್ಷಕರು ನಿರಂತರ ವಿದ್ಯಾರ್ಥಿ ಇದ್ದಂತೆ. ಶಿಕ್ಷಕರು ವಿದ್ಯಾರ್ಥಿ ಮನೋಭಾವ ಹೊಂದಿದರೆ ಮಾತ್ರ ಹೊಸತನ್ನು ಕಲಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಾನು ಹೇಳಿದ್ದೇ ಪಾಠ ಎಂಬ ಮನಸ್ಥಿತಿಯನ್ನು ಶಿಕ್ಷಕರು ಹೊಂದಬಾರದು. ಮಕ್ಕಳು ಕೇಳಿದ ಪ್ರಶ್ನೆಗೆ ನಿಮ್ಮ ಬಳಿ ಉತ್ತರ ಇಲ್ಲದೆ ಹೋದರೆ ಗೊತ್ತಿಲ್ಲ ಎಂದು ಹೇಳಿ. ಆ ಪ್ರಶ್ನೆಗೆ ಉತ್ತರ ಕಂಡುಕೊಂಡು ನಾಳೆ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಿ. ಶಿಕ್ಷಕರು ಪಠ್ಯದಲ್ಲಿರುವ ಹಳೆಗನ್ನಡದ ಕಾವ್ಯಗಳನ್ನು ಮಾತ್ರ ಅಧ್ಯಯನ ನಡೆಸಿದರೆ ಸಾಲದು. ಕನ್ನಡ ಸಾಹಿತ್ಯ ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡ ಬೇಕು. ಸಂಧಿ, ಸಮಾಸ, ಅಲಂಕಾರಗಳನ್ನು ಗಂಭೀರವಾಗಿ ಓದಿ. ಏಕೆಂದರೆ ಇದನ್ನು ಸರಿಯಾಗಿ ಪಾಠ ಮಾಡುವ ವ್ಯವಸ್ಥೆ ಉನ್ನತ ಶಿಕ್ಷಣದಲ್ಲೂ ಇಲ್ಲ ಎಂದು ತುಂಬಾ ವಿಷಾದಿಂದ ಹೇಳುತ್ತಿದ್ದೇನೆ ಎಂದರು.
ಹಳೆಗನ್ನಡ ಮತ್ತು ನಡುಗನ್ನಡವನ್ನು ಸರಿಯಾಗಿ ಅರ್ಥೈಸಲು ಸಾಧ್ಯವಾದರೆ ಮಾತ್ರ ಹೊಸಗನ್ನಡವನ್ನು ಸೃಷ್ಟಿಸಲು ಸಾಧ್ಯ. ಪ್ರಸ್ತುತ ಅನ್ಯ ಜ್ಞಾನ ಶಾಖೆಗಳಿಂದ ಸಾವಿರಾರು ಪದಗಳು ನಮ್ಮ ಭಾಷಾ ವಲಯದಲ್ಲಿ ಪ್ರವೇಶ ಮಾಡುತ್ತಿವೆ. ಆರಂಭದಲ್ಲಿ ನಾವು ಅವುಗಳನ್ನು ಇಂಗ್ಲಿಷ್‌ನಲ್ಲಿ ಬಳಸಿದರೂ ನಿಧಾನವಾಗಿ ಅವುಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಠಂಕಿಸುವ ಹೊಸ ವ್ಯವಸ್ಥೆ ಬೇಕಿದೆ. ಈ ಬಗ್ಗೆ ಸರ್ಕಾರ, ಅಕಾಡೆಮಿಗಳು, ಶಿಕ್ಷಣ ಇಲಾಖೆ ಆಲೋಚನೆ ಮಾಡಬೇಕು. ವೈದ್ಯಕೀಯ, ವಾಸ್ತುಶಿಲ್ಪ, ಸಂಗೀತ, ಗಣಕೀಕರಣ, ಕೃಷಿ ಸೇರಿದಂತೆ ವಿವಿಧ ಜ್ಞಾನ ಕ್ಷೇತ್ರಗಳಲ್ಲಿ ಹೊಸ ಪದಗಳು ಸೃಷ್ಟಿಯಾಗುತ್ತಿವೆ. ಆ ಹೊಸ ಇಂಗ್ಲಿಷ್ ಶಬ್ದಗಳಿಗೆ ಸರಿಯಾದ ಕನ್ನಡ ಪದಗಳನ್ನು ಸೃಷ್ಟಿಸಬೇಕಾದರೆ ಕನ್ನಡದ ನಿನ್ನೆಯನ್ನು ತಿಳಿದಿರಬೇಕು. ಆಗ ಮಾತ್ರ ನಾವು ನಾಳೆಗಳಿಗೆ ಬೇಕಾದ ಪದಗಳನ್ನು ಸೃಷ್ಟಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಮಾತನಾಡಿ, ಮೈಸೂರು ದಕ್ಷಿಣ ಕ್ಷೇತ್ರದಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಮಕ್ಕಳಲ್ಲಿ ಭಾಷಾ ಕಲಿಕಾ ಮಟ್ಟ ಕಡಿಮೆ ಇರುವುದು ಕಂಡು ಬಂತು. ಆ ನಂತರ 2 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳು ಕನ್ನಡವನ್ನು ಸ್ಪಷ್ಟವಾಗಿ ಓದುವಂತೆ ಹಾಗೂ ಬರೆಯುವಂತೆ ಮಾಡಲು ಶಿಕ್ಷಕರಿಗೆ ಹೊಸ ಸವಾಲು ನೀಡಲಾಯಿತು. ಈ ಸವಾಲವನ್ನು ಶಿಕ್ಷಕರು ಸ್ವೀಕರಿಸಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇವಣ್ಣ, ನಂಜನಗೂಡು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ನೃಪತುಂಗ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ. ಸುದರ್ಶನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಬಿ. ಶ್ರೀಕಂಠಸ್ವಾಮಿ ಹಾಗೂ ಇತರರು ಇದ್ದರು.