ಆಂಗ್ಲಭಾಷೆಗೆ ಮಾರುಹೋದ ಕನ್ನಡಿಗರು: ಯುರ್ವೇದ ತಜ್ಞ ಡಾ.ಅಬ್ದುಲ್ ಖಾದರ್ ಬೇಸರ

Kannada rajyotsava was celebrated in Maharani College
Published on

ಮೈಸೂರು: ನಾವೆಲ್ಲ ಇಂಗ್ಲಿಷ್‌ಗೆ ಮಾರು ಹೋಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿದ್ದೇವೆ. ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ಬೆಂಗಳೂರಿನ ಆಯುರ್ವೇದ ತಜ್ಞ ಡಾ.ಅಬ್ದುಲ್ ಖಾದರ್ ವಿಷಾದಿಸಿದರು.

ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಕನ್ನಡ ವಿಭಾಗವು ಐಕ್ಯುಎಸಿ ಮತ್ತು ಜನಪರ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಗ್ಲಿಷ್ ಬಗ್ಗೆ ಆಕರ್ಷಣೆ ಇರುವುದರಿಂದ ಕನ್ನಡದಲ್ಲಿ ಮಾತನಾಡಿದರೆ ಕೀಳರಿಮೆ ಎಂದು ಭಾವಿಸುತ್ತೇವೆ. ಇದು ಕನ್ನಡ ಕುಗ್ಗಲು ಕಾರಣವಾಗಿದೆ. ಇದರ ಬದಲು ಪ್ರೀತಿಯಿಂದ ಕನ್ನಡ ಬಳಸಿ ಹಾಗೂ ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಮ್ಮ ಸಾಂಸ್ಕೃತಿಕ ಹಾಗೂ ಸಂಸ್ಕಾರದ ಪರಿಸರದಿಂದ ಆರೋಗ್ಯ ನಿರ್ಧಾರವಾಗುತ್ತದೆ. ಜಂಕ್‌ಫುಡ್‌ನಿಂದ ದೂರವಿರಿ. ಸದಾ ತಾಳ್ಯೆಯಿಂದ ಇದ್ದು, ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಆತ್ಮಹತ್ಯೆಯಂತಹ ನಿರ್ಧಾರಗಳಿಂದ ದೂರವಿರಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಬೇಕು. ಶಾಸ್ತ್ರೀಯ ಸ್ಥಾನಮಾನದ ಸದುಪಯೋಗ ಆಗಬೇಕು. ಕೇಂದ್ರದನಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳಬೇಕು ಎಂದರು.
ಅಹಲ್ಯಾಬಾಯಿ ಹೋಳ್ಕರ್ ಪತ್ತಿನ ಮಹಿಳಾ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಡಾ.ನಳಿನಿ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಕನ್ನಡ ಕಲಿಸಬೇಕು. ಅವಶ್ಯಕತೆ ಇರುವ ಕಡೆಯಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡಿಗರು ಇನ್ನೊಬ್ಬರು ಮುಂದೆ ಕನ್ನಡ ಉಳಿಸಿ ಎಂದು ಕೈಚಾಚುವ ಪರಿಸ್ಥಿತಿ ಬರಬಾರದು ಎಂದರು.

ಬೆಂಗಳೂರಿನ ಆರಾಧ್ಯ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಕೆ. ಉಮಾ ಮಹೇಶ್ವರಿ ನೃತ್ಯ ಪ್ರದರ್ಶನ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ. ಗೋವಿಂದೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಐಕ್ಯುಐಸಿ ಸಂಚಾಲಕ ಡಾ.ವಿ.ಮಂಜುನಾಥ್, ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net