

ಮಂಡ್ಯ: ಕರ್ನಾಟಕ-50 ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ರೋಟರಿ ಮಂಡ್ಯ ಸಹಯೋಗದಲ್ಲಿ ಅಚೀವರ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ನಗರದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜಾಥಾ ನಡೆಯಿತು.
ಐತಿಹಾಸಿಕ, ಪಾರಂಪರಿಕ ಸ್ಥಳಗಳನ್ನು ಮಕ್ಕಳಿಗೆ ಪರಿಚಯಿಸುವ ದೃಷ್ಟಿಯಿಂದ ನಗರದ ಗಜೇಂದ್ರಮೋಕ್ಷ ಕೊಳದ ಬಳಿ ರಾಜ್ಯೋತ್ಸವ ಆಚರಣೆಯೊಂದಿಗೆ ಜಾಥಾ ನಡೆಯಿತು. ಕೊಳದ ಸುತ್ತಲೂ ವಿದ್ಯಾರ್ಥಿಗಳು ಸಾಲಾಗಿ ನಿಂತು ಕನ್ನಡ ಭಾವುಟಗಳನ್ನು ಬೀಸುತ್ತಾ ಘೋಷಣೆ ಮೊಳಗಿಸಿದರು. ಕೊಳದ ಆವರಣದಲ್ಲಿನ ಬನ್ನಿವೃಕ್ಷಕ್ಕೆ ಶಾಸಕ ರವಿಕುಮಾರ್ ಗಣಿಗ ಪೂಜೆ ನೆರವೇರಿಸಿ ಜಾಥಾಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗಜೇಂದ್ರ ಮೋಕ್ಷ ಕೊಳವನ್ನು ಉಳಿಸುವ ಜವಾಬ್ದಾರಿಯನ್ನು ನಾನು ಇಂದೇ ತೆಗೆದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಕೊಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಇದನ್ನು ಆಕರ್ಷಣೀಯ ಸ್ಥಳವಾಗಿ ಮಾಡಲಾಗುವುದು. ಈ ಸ್ಥಳದಲ್ಲೂ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಘೋಷಿಸಿದರು.
ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಮಾಜಿ ಅಧ್ಯಕ್ಷ ಎಸ್.ನಾರಾಯಣ, ಎನ್‌ವೈಕೆ ನಿವೃತ್ತ ಲೆಕ್ಕಾಧಿಕಾರಿ ಎಚ್.ಎಂ.ಬಸವರಾಜು, ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಲಕ್ಕಪ್ಪ, ಮಂಡ್ಯದ ಗುತ್ತಲು ಅರ್ಕೇಶ್ವರನಗರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎನ್.ಮನುಕುಮಾರ್ ಗೊರವಾಲೆ, ಅಚೀವರ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ವಿದ್ಯಾ, ಆಡಳಿತಾಧಿಕಾರಿ ರಾಮ್‌ಸಿಂಗ್, ಜಗದೀಶ್, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು, ರೂಪಶ್ರೀ ತರಬೇತಿ ಸಂಸ್ಥೆ ಅಧ್ಯಕ್ಷ ರಾಜೇಶ್ ಇತರರಿದ್ದರು.
ಗಜೇಂದ್ರ ಮೋಕ್ಷ ಕೊಳದಿಂದ ಆರಂಭಗೊಂಡ ಜಾಥಾ ಪೇಟೆಬೀದಿ, ಹೊಳಲು ವೃತ್ತ, ಜೆ.ಸಿ.ವೃತ್ತ, ಆರ್.ಪಿ ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿ.ವಿ.ರಸ್ತೆ ಮಾರ್ಗದಲ್ಲಿ ಸಂಚರಿಸಿ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಗಮನ ಸೆಳೆಯಿತು. ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಅಂತ್ಯಗೊಳಿಸಲಾಯಿತು.