

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಎದುರು ನ.11 ರಂದು ಸಂಜೆ 7 ಗಂಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಚಿಗುರು ಕಲಾ ಬಳಗದ ಕಲಾವಿದರಿಂದ ಕನ್ನಡ ರಾಜ್ಯೋತ್ಸವ, ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕಿರುತೆರೆಯ ಹಾಸ್ಯ ಕಲಾವಿದರು, ಚಲನಚಿತ್ರ ಹಾಸ್ಯ ನಟರಾದ ಗೋಪಾಲ ಹೂಗಾರ, ಶ್ರೀಶ್ರೀಲ ಹೂಗಾರ, ಮುನೀರ ಅವಟಿಗೇರ ಮನವಿ ಮಾಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1.30 ಗಂಟೆಯಿಂದ ಸಾರ್ವಜನಿಕರಿಗೆ ಅನ್ನದಾಸೋಹ ಆಯೋಜಿಸಲಾಗಿದೆ. ಸಂಜೆ 4 ಗಂಟೆಗೆ ಪ್ರಮುಖ ಬೀದಿಗಳಲ್ಲಿ ವಿವಿಧ ವಾಹನಗಳ ಜಾಥಾ ನಡೆಸಲಾಗುತ್ತದೆ.
ಜನಪ್ರಿಯ ಕಲಾವಿದರಾದ ಮ್ಯೂಜಿಕ್ ಮೈಲಾರಿ, ತೃಪ್ತಿ ಧಾರವಾಡ ಅವರು ಕಲಾರಂಗದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಸಿ ಸನ್ಮಾನಿಸಲಾಗುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಕಲಾವಿದರಾದ ವಿನಾಯಕ ಭಟ್, ನಿಜಾಮ ಬಾಗೇವಾಡಿ, ಹನುಮಂತ ಮಹಾಲಿಂಗಪೂರ, ಮಲ್ಲು ತಟ್ಟಿ, ಸುನೀಲ ಬಿಸನಾಳ, ಅಟೋ ಕುಮಾರ, ಮೌನೇಶ ಬಡಿಗೇರ, ಪ್ರಸನ್ನ ಪಾಟೀಲ ಇನ್ನಿತರರು ಗೋಷ್ಠಿಯಲ್ಲಿದ್ದರು.