ಸಹಸ್ರ ಕಂಠಗಳಿಂದ ನಾಡಗೀತೆ ಗಾಯನ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Kannada Rajyotsava prelims meeting Mandya
Published on

ಮಂಡ್ಯ: ಕುವೆಂಪು ರಚಿತ ನಾಡಗೀತೆ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಸಹಸ್ರಾರು ಕಂಠಗಳಿಂದ ನಾಡಗೀತೆ ಗಾಯನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಶಾಲೆಗಳಿಂದ ಆಸಕ್ತ ಸಾವಿರ ಮಕ್ಕಳನ್ನು ಆಯ್ಕೆ ಮಾಡಿ ಮುಂಚಿತವಾಗಿ ನಾಡಗೀತೆ ಗಾಯನದ ತರಬೇತಿ ನೀಡಿ. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ ರಚಿಸಲಾಗಿದೆ. ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ನಿಯಮಾನುಸಾರ ಎಲ್ಲರಿಗೂ ಆಹ್ವಾನ ಪತ್ರಿಕೆಗಳನ್ನು ನೀಡಿ ಎಂದು ಸೂಚನೆ ನೀಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 32 ಶಾಲೆದಿಂದ ಪಥಸಂಚಲನ ನಡೆಯಲಿದೆ. ಕನ್ನಡ ನಾಡು,ನುಡಿ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವಂತಹ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಿ. ಐದು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಸಲಾಗುವುದು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಿಂಬಿಸುವ ಟ್ಯಾಬ್ಲೋವನ್ನು ಪ್ರದರ್ಶನ ಮಾಡಲಾಗುವುದು. ಜತೆಗೆ ವಿವಿಧ ಇಲಾಖೆಗಳ 20 ಟ್ಯಾಬ್ಲೋ ಪ್ರದರ್ಶನ ನಡೆಸಲಾಗುವುದು. ತಾಯಿ ಭುವನೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಎಲ್ಲ ಶಾಲಾ ವಿದ್ಯಾರ್ಥಿಗಳು ಬಿಳಿ ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಹಾಜರಾಗಬೇಕು. ನಾಡಗೀತೆ ಗಾಯನಕ್ಕೆ ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಲಯಬದ್ಧವಾಗಿ ನಾಡಗೀತೆ ಹಾಡುವ ಕುರಿತಾಗಿ ತರಬೇತಿ ನೀಡಿ. ವಿದ್ಯಾರ್ಥಿಗಳಿಗೆ ತರಬೇತಿ ದಿನ ಹಾಗೂ ಕನ್ನಡ ರಾಜ್ಯೋತ್ಸವ ದಿನದಂದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್, ಪೌರಾಯುಕ್ತೆ ಪಂಪಾಶ್ರೀ, ಡಿಡಿಪಿಐ ಲೋಕೇಶ್, ಡಿಡಿಪಿಯು ಸಿ.ಚಲುವಯ್ಯ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net