

ಮಂಡ್ಯ: ಜಿಲ್ಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಲಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಇದು ಕನ್ನಡ ತಾಯಿಯ ಹಬ್ಬವಾಗಿದ್ದು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಕೆಲಸಗಳು ಸುಸೂತ್ರವಾಗಿ ನಡೆಸಲು ಸ್ವಾಗತ, ವೇದಿಕೆ, ಪಥಸಂಚಲನ, ಸಾಂಸ್ಕೃತಿಕ, ಮೆರವಣಿಗೆ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಸ್ವಾಗತ ಸಮಿತಿಯು ತಪ್ಪದಂತೆ ಕನ್ನಡಪರ ಸಂಘ ಸಂಸ್ಥೆ ಹಾಗೂ ಸಂಘಟನೆಗಳು, ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿ. ಪಥ ಸಂಚಲನಕ್ಕೆ ಪೊಲೀಸ್, ಗೃಹ ರಕ್ಷಕ, ಅಬಕಾರಿ, ಎನ್.ಸಿ.ಸಿ, ಎನ್.ಎಸ್.ಎಸ್ ಸೇರಿದಂತೆ ಸುಮಾರು 30 ತಂಡ ಭಾಗವಹಿಸಲು ಪೂರ್ವಾಭ್ಯಾಸ ನಡೆಸಬೇಕು. ಮುಖ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ನಡೆಯಲಿದೆ. ಆದ್ದರಿಂದ ಸಮ್ಮೇಳನದ ಕುರಿತ ಗೀತೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಕನ್ನಡ ರಾಜ್ಯೋತ್ಸವದಲ್ಲಿ ಮಕ್ಕಳಿಂದ ನೃತ್ಯ ಪ್ರದರ್ಶನ ನೀಡಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿ ಎಂದು ತಿಳಿಸಿದರು.
ಎಲ್ಲ ಇಲಾಖೆಗೆ ಸಂಬಂಧಿಸಿದ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಬೇಕು. ಶಿಕ್ಷಣ ಇಲಾಖೆಯು ಕನ್ನಡ ಸಾಹಿತ್ಯದ ಜ್ಞಾನಪೀಠ ಪ್ರಶಸ್ತಿ ವಿಜೇತರ ಸ್ತಬ್ದ ಚಿತ್ರವನ್ನು ಪ್ರದರ್ಶಿಸಬೇಕು. ಅಂದು ತಾಯಿ ಭುವನೇಶ್ವರಿ ಪ್ರತಿಮೆಯ ಮೆರವಣಿಗೆ ಬೆಳಗ್ಗೆ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಕ್ರೀಡಾಂಗಣದವರೆಗೆ ನಡೆಯಲಿದೆ. ಡೊಳ್ಳು ಕುಣಿತ, ವೀರಗಾಸೆ, ಕತ್ತಿವರಸೆ, ಪೂಜಾ ಕುಣಿತ, ತಮಟೆ, ನಗಾರಿ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಲಿವೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಪಿಡಬ್ಲುೃಡಿ ಇಇ ಹರ್ಷ ಇತರರಿದ್ದರು.