ಮುಂದಿನ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Kannada rajyotsava mandya
Published on

ಮಂಡ್ಯ: ಮುಂದಿನ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವೈಭವಯುತವಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಜಿಲ್ಲೆಗೆ ದೊರೆತಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸಲಾಗುವುದು. ದೇಶ ಸ್ವಾತಂತ್ರ್ಯ ಗಳಿಸಿದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆ ಹೊರಾಟದಲ್ಲಿ ಕರ್ನಾಟಕದ ಅನೇಕ ಹೋರಾಟಗಾರರು, ಸಾಹಿತಿ, ಭಾಷಾಭಿಮಾನಿಗಳು ಭಾಗವಹಿಸಿ ಏಕೀಕರಣ ಚಳವಳಿಗೆ ಕರೆ ನೀಡಿದರು. ಕನ್ನಡ ಮಾತನಾಡುವ ಪ್ರದೇಶಗಳನೊಳಗೊಂಡ ವಿಶಾಲ ಕನ್ನಡ ನಾಡಿನ ರಚನೆಗೆ ಆದ್ಯತೆ ನೀಡಿ 1924ರಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರೋತ್ಸಾಹದಿಂದ ಪ್ರೇರಪಣೆಗೊಂಡ ಅನೇಕ ಹಿರಿಯ ಸಾಹಿತಿಗಳು ರಾಜ್ಯ ರಚನೆಯಾಗಲೇಬೇಕೆಂದು ಹಠ ಹಿಡಿದರು. ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ, ವಾಸ್ತುಶಿಲ್ಪ ವೈಭವದಲ್ಲಿ ಇಡೀ ದೇಶಕ್ಕೆ ಕೀರ್ತಿ ತಂದಿರುವ ನಮ್ಮ ಕನ್ನಡ ನಾಡು ವಿಶಾಲ ರಾಜ್ಯವಾಗಿ ಕರ್ನಾಟಕ ಎಂದು ನಾಮಕರಣಗೊಂಡ ಸಂದರ್ಭವಂತೂ ನಮ್ಮೆಲ್ಲರಿಗೂ ಸ್ಮರಣೀಯ ಪವಿತ್ರ ದಿನವಾಗಿದೆ ಎಂದರು.

ಪ್ರಸ್ತುತ 31 ಜಿಲ್ಲೆಗಳನೊಳಗೊಂಡ ಸಮಗ್ರ ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ನೀರಾವರಿ, ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಜಗತ್ತಿನ ಭೂಪಟದಲ್ಲಿ ಹೆಗ್ಗುರುತು ಮೂಡಿಸಿರುವುದು ಕನ್ನಡಿಗರ ಹೆಮ್ಮೆ. ನಮ್ಮವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಭಾರತಾಂಬೆಯ ಕೀರ್ತಿ ಹೆಚ್ಚಿಸಿರುವುದು ಮತ್ತೊಂದು ಮೈಲಿಗಲ್ಲು. ನಾಡಿನ ಕೀರ್ತಿಯನ್ನು ಹೆಚ್ಚಿಸಲು ಪ್ರಬುದ್ಧತೆಯನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ದುಡಿಯೋಣ. ಏಕೀಕರಣದಲ್ಲಿ ದುಡಿದವರ ಸೇವೆಯ ಸಾರ್ಥಕತೆಗೆ ಶ್ರಮಿಸೋಣ. ಗತವೈಭವದ ಸಂಭ್ರಮಾಚರಣೆಗೆ ಪ್ರೀತಿಯಿಂದ ಸೌಹಾರ್ದತೆಯಿಂದ ಪಾಲ್ಗೊಳ್ಳೋಣ. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಆರಾಧಕರಾಗೋಣ. ಕನ್ನಡ ನೆ, ಜಲ, ಸಾಹಿತ್ಯ, ಸಂಸ್ಕೃತಿಯ ಸಂರಕ್ಷಣೆಗೆ ಸಂಕಲ್ಪ ಮಾಡೋಣ ಎಂದು ಹೇಳಿದರು.

ನಮ್ಮ ಸರ್ಕಾರ ಸರ್ವಜನರ ಶ್ರೇಯೋಭಿವೃದ್ಧಿಗೆ ಹಲವು ಯೋಜನೆ ರೂಪಿಸಿ ಜಾರಿಗೆ ತಂದಿದೆ. ಎಲ್ಲ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಿಳೆಯರು ಸಂಚರಿಸುವ ಹಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಯೋಜನೆ ಮಂಡ್ಯ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 1.94 ಕೋಟಿ ಮಹಿಳಾ ಪ್ರಯಾಣಿಕರು ಸದುಪಯೋಗಪಡೆಸಿಕೊಂಡಿದ್ದು, 47,30 ಕೋಟಿ ರೂ ಸರ್ಕಾರದಿಂದ ಭರಿಸಲಾಗುತ್ತಿದೆ. ಅಂತೆಯೇ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ಗರಿಷ್ಟ 10 ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಒಟ್ಟು 4,77,561 ಪಡಿತರ ಕುಟುಂಬ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಮಹಿಳೆಯರ ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆಯಿಟ್ಟಿರುವ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 4,33,854 ಮಹಿಳೆಯರು ನೋಂದಾಯಿಸಿಕೊಂಡಿದ್ದು, ಒಟ್ಟು 4,07,457 ಮಹಿಳೆಯರಿಗೆ ಈಗಾಗಲೇ 2 ಸಾವಿರ ರೂನಂತೆ 81,49 ಕೋಟಿ ರೂ ಪಾವತಿಸಲಾಗಿದೆ. ಅಂತೆಯೇ ಉಚಿತ ವಿದ್ಯುತ್ ಯೋಜನೆಯಡಿ ಜಿಲ್ಲೆಯಲ್ಲಿ 4,47,786 ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ 1,649 ಲಕ್ಷ ರೂ ಮೊತ್ತದ ವಿದ್ಯುತ್ ಬಿಲ್ ಹಾಗೂ ಅಕ್ಟೋಬರ್‌ನಲ್ಲಿ 1,580 ಲಕ್ಷ ರೂ ಮೊತ್ತದ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಂದೇ ಬಾರಿಗೆ 8 ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಲು 16 ಕೋಟಿ ರೂ ಪ್ರಸ್ತಾವನೆಗೆ ಮಂಜೂರಾತಿ ನೀಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಡಿ ಮಾಡಿದ ಸಾಧನೆಗಾಗಿ ಕೇಂದ್ರ ಸರ್ಕಾರ ಮಂಡ್ಯ ಜಿಲ್ಲೆಗೆ ಪ್ರಥಮ ಬಹುಮಾನ ನೀಡಿದೆ. ಸಿರಿಧಾನ್ಯ ಮತ್ತು ಬೆಲ್ಲದ ಬಳಕೆಯನ್ನು ಉತ್ತೇಜಿಸಲು ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನ ಹಾಗೂ ಬೆಲ್ಲದ ಪರಿಷೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಮೈಸೂರು ಸಕ್ಕರೆ ಕಂಪನಿಯ 2023-24ನೇ ಸಾಲಿನ ಕಬ್ಬು ನುರಿಯುವ ಚಾಲನೆಯನ್ನು ಜು.6ರಿಂದ ಪ್ರಾರಂಭಿಸಿ 2,25,000 ಮೆಟ್ರಿಕ್ ಟನ್ ಕಬ್ಬು ನುರಿಸಿ 1,58,000 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ತಿಳಿಸಿದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಎನ್.ಯತೀಶ್, ಎಡಿಸಿ ಡಾ.ಎಚ್.ಎಲ್.ನಾಗರಾಜು, ಎಸಿ ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net