

ಮಂಡ್ಯ: ಜಾತಿ, ಮತ, ಧರ್ಮ ಮೇಲು ಕೀಳು ಎಂಬೆಲ್ಲ ಭಾವನೆಗಳು ನಮ್ಮನ್ನು ಹಿಂಡುತ್ತಿವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಹುಟ್ಟಿದಾಗ ಮಗು ವಿಶ್ವಮಾನವನಾಗಿ ಹುಟ್ಟುತ್ತದೆ. ಆದರೆ ಬೆಳೆಯುತ್ತಾ ಹೋದಂತೆ ಅದು ಕುಬ್ಜವಾಗುತ್ತದೆ. ಆದ್ದರಿಂದ ನಿರಂಕುಶ ವಾದಿಗಳಾಗಿ ಎಂದು ಕುವೆಂಪು ಹೇಳಿದ್ದಾರೆ. ಆದರೆ ಇಂದಿನ ಸಮಾಜ ಅಂಕುಶವೇ ಇಲ್ಲದಂತೆ ವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಈ ಭಾವನೆಗಳ ಮೇಲೆ ಅಂಕುಶ ಸಾಧಿಸಿದರಷ್ಟೇ ವಿಶ್ವಮಾನವರಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣದ ಉದ್ದೇಶವು ಮನುಷ್ಯ ಅಸಮಾನತೆಯ ವಿರುದ್ಧವಾಗಿ ಹೋರಾಡಬೇಕು ಎಂಬುದಾಗಿದೆ. ಆದರೆ ಶಿಕ್ಷಣವನ್ನು ಪಡೆದವರೆ ಭ್ರಷ್ಟಾಚಾರಿ ಹಾಗೂ ಅಪರಾಧಿಗಳನ್ನು ಸನ್ಮಾನಿಸುತ್ತಿದ್ದಾರೆ. ಅವರನ್ನು ವಿರೋಧಿಸುವ ಸಾಹಸ ಮಾಡುತ್ತಿಲ್ಲ. ಈ ಮನೋಭಾವದಿಂದ ಸಮಾಜ ಸುಧಾರಣೆಯಾಗಲು ಸಾಧ್ಯವಿಲ್ಲ ಎಂದ ಅವರು, ಕನ್ನಡ ನಾಡಿನಲ್ಲಿ ಖನಿಜ ಮತ್ತು ಜಲ ಸಂಪತ್ತಿದೆ. ಹವಾಮಾನ ವೈವಿಧ್ಯತೆಗಳನ್ನು ಕಾಣಬಹುದು. ಇಂತಹ ಸಮೃದ್ಧ ಕರ್ನಾಟಕದ ಭಾಷೆಯಾದ ಕನ್ನಡವು ತನ್ನ ಆಕರ್ಷಣೀಯ ಅಕ್ಷರಗಳ ಮೂಲಕ ಜಗತ್ತಿನ ಅತ್ಯಂತ ಸುಂದರ ಭಾಷೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ಬಣ್ಣಿಸಿದರು.
ಸಾಹಿತ್ಯದ ದೃಷ್ಟಿಯಲ್ಲಿ ಹೇಳುವುದಾದರೆ ಪಂಪನಿಂದ ಹಿಡಿದು ಕುವೆಂಪು ಅವರವರೆಗೆ ಅನೇಕ ಶ್ರೇಷ್ಟ ಕೃತಿಗಳು ರಚನೆಗೊಂಡಿವೆ. ಇಷ್ಟೆಲ್ಲ ಮಹತ್ವದಿಂದ ಕೂಡಿರುವ ಕನ್ನಡ ಭಾಷೆಯನ್ನು ಮಾತನಾಡುತ್ತಿರುವ ನಾವೇ ಧನ್ಯ. ಇಂದಿನ ಯುವ ಜನತೆ ಒಂದು ಭ್ರಮೆಯ ಲೋಕದಲ್ಲಿ ಜೀವಿಸುತ್ತಿದ್ದಾರೆ. ಕೆಲವೊಮ್ಮೆ ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಲಿಷ್ಟ ಸಮಾಜವನ್ನು ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಯುವಜನತೆಯೇ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಆರ್.ದಶರಥ ಮಾತನಾಡಿ, ಭಾರತ ಮಾತೆಯ ಮಡಿಲಲ್ಲಿ ಬೆಳೆದ ಮಕ್ಕಳಾದ ನಾವು ಒಂದೇ ಎಂಬ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು. ನಮ್ಮಲ್ಲಿ ಆತ್ಮಸಾಕ್ಷಿ ಇದ್ದರೆ ಕನ್ನಡಾಂಬೆಯ ಮಕ್ಕಳಾಗಿ ಉಳಿಯುತ್ತೇವೆ ಎಂದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕುಮಾರ್ ಬೆಳಲೆ, ಖಜಾಂಚಿ ಡಾ.ಜೋಶ್ಸ್ನಾ ಕಾರಂತ್, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆಂಪಮ್ಮ, ಡಾ.ಪ್ರಮೀಳಾ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು. ಇದೇ ವೇಳೆ ಕಾಲೇಜಿನ ವಾರ್ಷಿಕ ಸಂಚಿಕೆ ’ನೆಲದ ಸಿರಿ’ಯನ್ನು ಬಿಡುಗಡೆಗೊಳಿಸಲಾಯಿತು. ಗಾಯಕ ಗಾಮನಹಳ್ಳಿ ಸ್ವಾಮಿ ಮತ್ತು ನೇತ್ರಾ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.