ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

WhatsApp Image 2023-11-01 at 10.05.07 AM
Published on

ಮಡಿಕೇರಿ:

ಕನ್ನಡ ರಾಜ್ಯೋತ್ಸವ ನಾಡಿನೆಲ್ಲೆಡೆ ಕನ್ನಡ ಧ್ವಜ ಹಾರಿಸಿ, ನಾಡಗೀತೆ ಹಾಡಿ ಸಂಭ್ರಮಿಸುವ ದಿನದ ಜತೆಗೆ ಸಹಬಾಳ್ವೆಯ ಸಂದೇಶ ನೀಡಿ ಸೌಹಾರ್ದತೆಯನ್ನು ಪಸರಿಸುವ ಶುಭದಿನವೂ ಆಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಭಿಪ್ರಾಯಪಟ್ಟರು. ಬುಧವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾಡಳಿತ ವತಿಯಿಂದ ನಡೆದ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.

ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದ್ದಾಗಿದ್ದು, ಈ ಮೂಲಕ ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ರೂಪಿತವಾಗಿರುವುದು ಕನ್ನಡ ನಾಡಿನ ಹಿರಿಮೆಯಾಗಿದೆ. ಕನ್ನಡ ಸಾರಸ್ವತ ಲೋಕವು ೮ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕನ್ನಡ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಯನ್ನು ಬಿಂಬಿಸುತ್ತದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಹಾಗೆಯೇ ಪ್ರಾದೇಶಿಕ ವಿಭಿನ್ನ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಮಾಡಬೇಕಿದೆ. ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ರಾಜ್ಯೋತ್ಸವ ಕೆ.ಎಸ್. ನಿಸಾರ್ ಅಹಮ್ಮದ್ ರವರ ಜೋಗಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಎಂಬಂತೆ ನಮ್ಮೆಲ್ಲರ ನಿತ್ಯೋತ್ಸವವಾಗಬೇಕು.

ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮೈಸೂರು ರಾಜ್ಯ ’ಕರ್ನಾಟಕ’ ಎಂದು ಮರುನಾಮಕರಣವಾಗಿ ಇಂದಿಗೆ ೫೦ ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ’ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ- ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ ೫೦ ’ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ನಿಮಿತ್ತ ಬುಧವಾರದಿಂದ ೨೦೨೪ ರ ನವೆಂಬರ್ ವರೆಗೆ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಈ ಮಣ್ಣಿನ ಐತಿಹಾಸಿಕ ಕಾರ್ಯಕ್ರಮಗಳಾದ ತಲಕಾವೇರಿ ತೀರ್ಥೋದ್ಭವ ಚಟುವಟಿಕೆಗೆ ೧.೪೦ ಕೋಟಿ ರೂ. ಮತ್ತು ಕೊಡಗಿನ ಹಿರಿಮೆಯನ್ನು ಹೆಚ್ಚಿಸುವ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಕಾರ್ಯಕ್ರಮಗಳಿಗೆ ಒಟ್ಟು ೧.೫೫ ಕೋಟಿ ರೂ. ಅನುದಾನ ಕೊಡುವ ಮೂಲಕ ಸರ್ಕಾರ ಈ ನಾಡು ನುಡಿ ಸಂಸ್ಕೃತಿಯ ಬಗೆಗಿನ ಕಾಳಜಿ ಮೆರೆದಿದೆ. ಇಂದು ಕರುನಾಡು ಇಡೀ ದೇಶದಲ್ಲೇ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಅಗ್ರಸ್ಥಾನದಲ್ಲಿದೆ. ಈ ಸರ್ಕಾರ ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲ ಬಗೆಯ ಜನರನ್ನು ಪ್ರಗತಿ ಮತ್ತು ಸಮಾನತೆಯೆಡೆಗೆ ಕೊಂಡೊಯ್ಯುತ್ತಿದೆ. ಈ ಯೋಜನೆಗಳ ಮೂಲಕ ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಶಕ್ತಿ ಯೋಜನೆ ಅಡಿಯಲ್ಲಿ ಮಡಿಕೇರಿ ಘಟಕಕ್ಕೆ ಸಂಬಂಧಿಸಿದಂತೆ ೨೦,೭೮,೫೪೪ ಮಹಿಳೆಯರು ಲಾಭ ಪಡೆದಿದ್ದಾರೆ. ೧,೧೨,೦೮೯ ಕುಟುಂಬಗಳು ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಂಡಿವೆ. ೧,೩೫,೩೮೧ ಫಲಾನುಭವಿ ಕುಟುಂಬಗಳು ಗೃಹಜ್ಯೋತಿ ಯೋಜನೆ ಲಾಭ ಪಡೆದುಕೊಂಡಿವೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಒಟ್ಟು ೧,೧೧,೪೨೦ ಆದ್ಯತಾ ಪಡಿತರ ಚೀಟಿ ಕುಟುಂಬಗಳು ಸದುಪಯೋಗ ಪಡೆದುಕೊಳ್ಳುತ್ತಿವೆ. ಈ ಯೋಜನೆಗಳನ್ನು ಸರ್ಕಾರ ಚುನಾವಣೆಯ ಮುಂಚೆ ಭರವಸೆ ನೀಡಿ ಕೇವಲ ನೂರು ದಿನಗಳಲ್ಲಿ ಈಡೇರಿಸುವ ಮೂಲಕ ಕನ್ನಡಿಗರು ಸರ್ಕಾರದ ಮೇಲೆ ಇಟ್ಟಿದ್ದ ಭರವಸೆಯನ್ನು ಈಡೇರಿಸಲಾಗಿದೆ. ನುಡಿದಂತೆ ನಡೆಯುವ ಈ ಮಣ್ಣಿನ ಗುಣವನ್ನು ಜನಪರ ಸರ್ಕಾರವಾಗಿ ಚಾಚು ತಪ್ಪದೇ ಪಾಲನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಲಾಗಿದೆ ಎಂದು ಬಣ್ಣಿಸಿದರು.

ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಎನ್.ಪಿ. ಅನಿತಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net