ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Kannada Rajyotsava celebrated at Vidyaranyapuram, Mysore
Published on

ಮೈಸೂರು: ನಗರದ ವಿದ್ಯಾರಣ್ಯಪುರಂನ ಮಿಲ್ಕ್ ಸೆಂಟರ್ ರಸ್ತೆಯಲ್ಲಿ ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ಅದ್ದೂರಿಯಾಗಿ ಶನಿವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕನ್ನಡಿಗರ ಅತೀ ದೊಡ್ಡ ಹಬ್ಬ. ಕನ್ನಡಿಗರಾಗಿ ಈ ಭೂಮಿಯಲ್ಲಿ ನಾವು ಹುಟ್ಟಿರುವುದೇ ನಮ್ಮ ಅದೃಷ್ಟ ಎಂದು ಹೇಳಿದರು.

ಆಧುನಿಕತೆ, ತಂತ್ರಜ್ಞಾನ, ವೈಜ್ಞಾನಿಕ ನಾಗಾಲೋಟದ ಕಾರಣಕ್ಕಾಗಿ ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ಮರೆಯಬಾರದು. ಇಂದು ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ, ದೇಶದ ಜನರು ತಮ್ಮ ಜೀವನಕ್ಕಾಗಿ ಬಂದು ನೆಲೆಯೂರಿದ್ದಾರೆ. ಅವರೆಲ್ಲರಿಗೂ ನಮ್ಮ ಜನ ವಸತಿ, ಉದ್ಯೋಗ, ರಕ್ಷಣೆ ಎಲ್ಲವನ್ನೂ ನೀಡಿದ್ದಾರೆ. ಆದರೆ, ಪರಭಾಷಿಕರು ಬೇರೆ ಭಾಷೆಯಲ್ಲಿ ವ್ಯವಹರಿಸಿ ಕನ್ನಡಕ್ಕೆ ಕಪ್ಪುಚುಕ್ಕೆ ತಂದರೆ ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕೈಗಾರಿಕೆಗಳು, ತಂತ್ರಜ್ಞಾನ ಆಧಾರಿತ ಬಹುರಾಷ್ಟ್ರೀಯ ಕಂಪನಿಗಳು ಕೇವಲ ಲಾಭಗಳಿಸುವ ದೃಷ್ಟಿಯಿಂದ ಸಂಸ್ಥೆಗಳಲ್ಲಿ ಉತ್ತರ ಭಾರತೀಯರು, ಪರಭಾಷಿಗರಿಗಷ್ಟೇ ಅವಕಾಶಗಳನ್ನು ಕೊಟ್ಟು ಕನ್ನಡಿಗರಿಗೆ ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಹೋರಾಟ ಅನಿವಾರ್ಯವಾಗುತ್ತದೆ. ಕನ್ನಡ ಭಾಷೆ, ನೆಲ ಜಲದ ವಿಷಯ ಬಂದಾಗ ಬಡವ, ಶ್ರೀಮಂತ, ಜಾತಿ, ಧರ್ಮ ಎಲ್ಲವನ್ನೂ ಬಿಟ್ಟು ಕೇವಲ ನಾವೆಲ್ಲರು ಕನ್ನಡಿಗರು ಎಂಬ ಒಗ್ಗಟ್ಟಿನ ಭಾವದಿಂದ ಹೋರಾಟಕ್ಕೆ ಧುಮುಕಬೇಕು ಎಂದು ಕರೆ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ.ಸುನೀಲ್, ಮುಖಂಡರಾದ ಆರ್.ಸಿ.ಜೋಗಿಮಹೇಶ್, ಶಂಕರ್ ಬಾಸ್, ರವಿಶಂಕರ್, ವಿನಯ್ ಕುಮಾರ್, ಕುಮಾರ್, ಪಟಾಕಿ ಮಂಜುನಾಥ್,ಪ್ರಗತಿಪರ ಚಿಂತಕ ಅಶೋಕಪುರಂ ರಾಮ್, ಫಾರೆಸ್ಟ್ ವಿಶ್ವ, ನಾಗರಾಜು, ನಂದ, ಶಶಿ, ನಾಗೇಶ್, ಸ್ವರೂಪ, ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net