

ಮಡಿಕೇರಿ: ವೀರನಾಡು ರಕ್ಷಣಾ ವೇದಿಕೆ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಉದ್ಯಮಿ ಎಂ.ವಿ.ಲೋಕೇಶ್ ಧ್ವಜಾರೋಹಣ ನೆರವೇರಿಸಿ, ಕನ್ನಡ ಭಾಷೆ ವಿಶ್ವದಾದ್ಯಂತ ಪಸರಿಸುವಂತಾಗಲಿ ಎಂದು ಶುಭಕೋರಿದರು.
ವೇದಿಕೆಯ ಗೌರವಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಮೂರು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಗೌರವಿಸುವಂತಾಗಬೇಕು ಮತ್ತು ಇತರರಿಗೂ ಕಲಿಸುವಂತಾಗಬೇಕು ಎಂದರು.
ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಕೊಡಗಿನಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಅಳವಡಿಸಿದ ಫಲಕಗಳಲ್ಲಿ ಕನ್ನಡವನ್ನು ದಪ್ಪ ಅಕ್ಷರಗಳಲ್ಲಿ ಬಳಸುವಂತಾಗಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸುವುದಾಗಿ ತಿಳಿಸಿದ ಅವರು, ತಿಂಗಳ ಕೊನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ವೇದಿಕೆಯ ನಗರಾಧ್ಯಕ್ಷ ಪ್ರದೀಪ್ ಕರ್ಕೆರ, ಜಿಲ್ಲಾ ಕಾರ್ಯದರ್ಶಿ ಹಿದಾಯತ್‌ವುಲ್ಲ, ಜಾದುಗಾರ ವಿಕ್ರಮ್ ಶೆಟ್ಟಿ, ಪ್ರಮುಖರಾದ ಟಿ.ಪಿ.ರಾಜೇಂದ್ರ, ಟಿ.ಎಲ್.ಅಶೋಕ್, ಜಗದೀಶ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ನಾಗರಾಜ್, ಮೋಣು ಮತ್ತಿರರು ಉಪಸ್ಥಿತರಿದ್ದರು.