ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ

2adarshkdga7
Published on

ಮಡಿಕೇರಿ: ಮಡಿಕೇರಿಯಲ್ಲಿ ೬೭ ವರ್ಷಗಳ ಸುಧೀರ್ಘ ಇತಿಹಾಸವಿರುವ ಮಹದೇವಪೇಟೆ ಮಹಿಳಾ ಸಹಕಾರ ಸಂಘ ನಗರದ ಹೆಗ್ಗುರುತುಗಳಲ್ಲಿ ಒಂದಾಗಿದ್ದು ಮಹಿಳೆಯರ ಶ್ರೇಯೋಭಿವೃದ್ಧಿಯಲ್ಲಿ ಮಹಿಳಾ ಸಮಾಜದ ಸದಸ್ಯೆಯರ ಶ್ರಮ ಮಹತ್ವದ್ದಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್ ಶ್ಲಾಘಿಸಿದರು.


ನಗರದ ಮಹದೇವಪೇಟೆ ಮಹಿಳಾ ಸಂಘದ ವತಿಯಿಂದ ಆಯೋಜಿತ ೬೭ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಾಡು ನುಡಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಾಧಕರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.


ಮಹದೇವಪೇಟೆ ಮಹಿಳಾ ಸಹಕಾರ ಸಂಘವು ಕಳೆದ ೬೭ ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಮಡಿಕೇರಿ ನಗರದ ಹೆಗ್ಗುರುತುಗಳಲ್ಲಿ ೧೫೦ ಸದಸ್ಯೆಯರನ್ನು ಹೊಂದಿರುವ ಮಹದೇವಪೇಟೆ ಮಹಿಳಾ ಸಹಕಾರ ಸಂಘವೂ ಕೂಡ ಒಂದಾಗಿ ಬೆಳೆದಿದೆ. ಪಾರ್ವತಮ್ಮ ಬಸಪ್ಪ, ವಸುಂದರ ಪ್ರಸನ್ನ, ಆರತಿ ಶೆಣೈ, ಕಮಲ ಸುಬ್ಬಯ್ಯ, ಎನ್.ಸವಿತಾ ಭಟ್ ಸಾರಥ್ಯದಲ್ಲಿ ಮಹಿಳಾ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಮಹಿಳೆಯರಿಗಾಗಿ ಅನೇಕ ಕಾಯಕ್ರಮಗಳನ್ನು ರೂಪಿಸುತ್ತಾ ಸಾಕಷ್ಟು ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸಹಾಯವಾಣಿಯ ಮಾಹಿತಿ ಫಲಕ ಅಳವಡಿಕೆ ಉದ್ಯೋಗಮೇಳದಂಥ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದೂ ಸಲಹೆ ನೀಡಿದರು.


ಮಹದೇವಪೇಟೆ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಎನ್.ಸವಿತಾ ಭಟ್ ಮಾತನಾಡಿ, ಕನ್ನಡದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಮಹಿಳಾ ಸಹಕಾರ ಸಂಘದಿಂದ ಸಾಹಿತ್ಯ ಪರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಂಘದ ಸಾಧನೆಗಾಗಿ ೨೦೧೯ ರ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಪ್ರಶಸ್ತಿ ಮತ್ತು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಶತಮಾನೋತ್ಸವ ಸಂದರ್ಭ ಉತ್ತಮ ಸಹಕಾರ ಸಂಘ ಪ್ರಶಸ್ತಿಯು ನಮ್ಮ ಸಂಘಕ್ಕೆ ದೊರಕಿದೆ. ಪ್ರತೀ ತಿಂಗಳೂ ಮಹಿಳೆಯರ ಸಮ್ಮಿಲನ ಕಾರ್ಯಕ್ರಮ ಮಹಿಳಾ ಸಂಘದ ಸದಸ್ಯೆಯರ ಒಗ್ಗಟ್ಟಿನ ಪ್ರತೀಕವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಬದ್ಧರಾಗಿದ್ದೇವೆ ಎಂದರು.


ಕನ್ನಡ ಸಾಹಿತ್ಯ, ಸಾಹಿತಿಗಳ ಕುರಿತಂತೆ ರಸಪ್ರಶ್ನೆ ಸ್ಪರ್ಧೆಯನ್ನು ಸವಿತಾ ಭಟ್ ಮತ್ತು ಉಪಾಧ್ಯಕ್ಷೆ ಶೈಲಾ ಮಂಜುನಾಥ್ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಶ್ಯಾಮಲ ದಿನೇಶ್, ಅರವಿಂದ್ ಅಣ್ಣಪ್ಪ, ರೂಪಾ ಸುಮಂತ್, ಕಮಲ ಸುಬ್ಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net