

ಮಂಡ್ಯ: ಮಮ್ಮಿ, ಡ್ಯಾಡಿ ಸಂಸ್ಕೃತಿಯಲ್ಲಿ ಕಳೆದು ಹೋಗುತ್ತಿರುವ ಸನ್ನಿವೇಶದಲ್ಲಿ ನಮ್ಮ ನಾಡಿನ ಮೂಲ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಕರ್ನಾಟಕ ಸಂಘ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಹ.ಕ.ರಾಜೇಗೌಡ ಸಂಶೋಧನಾ ಕೇಂದ್ರದ ಉದ್ಘಾಟನೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಭವಿಷ್ಯದ ಮಕ್ಕಳಿಗೆ ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕವಾಗಿ ಭದ್ರ ಬುನಾದಿ ಹಾಕುವ ಕರ್ನಾಟಕ ಸಂಘದ ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಪಸರಿಸಬೇಕಿದೆ. ಹಾಗಾಗಿ ಜಯಪ್ರಕಾಶಗೌಡರು ರಾಜ್ಯಾದ್ಯಂತ ಸಂಘವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ ಎಂದರು.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕರ್ನಾಟಕ ಸಂಘ ಮಾಡುತ್ತಿರುವ ಕಾರ್ಯಕ್ರಮಗಳು ಸುಸ್ಥಿರ ಮತ್ತು ಸಂಪ್ರದಾಯದ ಬದುಕಿಗೆ ಮಾರ್ಗದರ್ಶಕವಾಗಿವೆ. ಹಾಗಾಗಿ ಜಯಪ್ರಕಾಶಗೌಡರು ತಮ್ಮ ಇಡೀ ತಂಡದೊಂದಿಗೆ ಸಾಕಷ್ಟು ಶ್ರಮವಹಿಸಿ ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಚಿಂತಕರು, ವಿಚಾರವಂತರು ಕೈಜೋಡಿಸಬೇಕಾಗಿದೆ ಕಂದರು.
ಪ್ರಪಂಚದಲ್ಲೇ ಮಂಡ್ಯದ ಸೊಗಡು ಪರಿಚಯವಾಗಿದೆ. ಆದರೆ, ನಮ್ಮ ನಡುವೆಯೇ ನಮ್ಮ ತನ ಎಂಬುದು ಮರೆತುಹೋಗುತ್ತಿದೆ. ಹಾಗಾಗಿ ಕರ್ನಾಟಕ ಸಂಘ ರಾಜ್ಯದೆಲ್ಲೆಡೆ ಶಾಖೆಗಳನ್ನು ತೆರೆದು ರಾಜ್ಯದ ಸಾಂಸ್ಕೃತಿಕ ಮೌಲ್ಯವನ್ನು ಉನ್ನತಕ್ಕೇರಿಸಲು ಶ್ರಮಿಸಬೇಕಾದದ್ದು ಅತ್ಯಗತ್ಯ ಎಂದು ವಿವರಿಸಿದರು.
ಹ.ಕ.ರಾಜೇಗೌಡ ಸಂಶೋಧನಾ ಕೇಂದ್ರ ಉದ್ಘಾಟಿಸಿದ ರಾಜ್ಯ ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಮಾತನಾಡಿ, ಪ್ರೊ.ಜಯಪ್ರಕಾಶಗೌಡರ ನೇತೃತ್ವದಲ್ಲಿ ಕರ್ನಾಟಕ ಸಂಘ ರಾಜ್ಯದಲ್ಲೇ ಒಳ್ಳೆಯ ಹೆಸರು ಮಾಡುತ್ತಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿನ ದಕ್ಷರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮತ್ತು ಆ ಮೂಲಕ ಸಮಾಜಕ್ಕೆ ಅವರಿಂದ ಅಮೂಲ್ಯ ಕೊಡುಗೆಯನ್ನು ತರುವ ನಿಟ್ಟಿನಲ್ಲಿ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಲಾರದ ಗೋವಿಂದರಾಜು(ಇಂಚರ) ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಹ.ಕ.ರಾಜೇಗೌಡರ ಕುಟುಂಬದವರು ಇದ್ದರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ 25 ಜನರಿಗೆ 15 ಸಾವಿರ ರೂ. ನಗದು ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.