

ಮಂಡ್ಯ: ಸರ್ಕಾರಿ ನೌಕರರ ಸಂಘದ ವತಿಯಿಂದ ಜ.6ರಂದು ಮಧ್ಯಾಹ್ನ 3.30ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ರಾಜ್ಯೋತ್ಸವ, ಗುರುವಂದನೆ ಮತ್ತು ಸೇವಾ ಪುರಸ್ಕಾರ, ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಶಂಭುಗೌಡ ತಿಳಿಸಿದರು.
ನೊಣವಿನಕೆರೆ ಸೋಮೆಕಟ್ಟೆ ಕಾಡುಸಿದ್ದೇಶ್ವರ ಸಂಸ್ಥಾನ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಸೇವಾ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ‘ಅಧಿಕಾರಿಗಳು, ನೌಕರರು ಮತ್ತು ವಿದ್ಯಾರ್ಥಿಗಳ ನಡೆ ಸ್ಪೂರ್ತಿದಾಯಕದ ಕಡೆ’ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪ್ರಧಾನ ಭಾಷಣ ಮಾಡಲಿದ್ದಾರೆ. ಇನ್ನು ಅದೇ ದಿನ ಬೆಳಗ್ಗೆ 11ಗಂಟೆಗೆ ಸಂಘದ ಕಾರ್ಯಕಾರಿಣಿ ಸಭೆ ಏರ್ಪಡಿಸಲಾಗಿದೆ. 7ನೇ ವೇತನ ಆಯೋಗ ಅನುಷ್ಠಾನ ಮತ್ತು ಇತರ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಸಂಘದ ಗೌರವಾಧ್ಯಕ್ಷ ಸಿ.ಜೆ.ಶರೀನಿವಾಸ್, ಪದಾಧಿಕಾರಿಗಳಾದ ಜಿ.ಎನ್.ನಾಗೇಶ್, ಕೆ.ಗೋಪಾಲ್, ಆರ್.ದೇವರಾಜ್, ಎಚ್.ಮಲ್ಲಿಕಾರ್ಜುನ, ಎ.ಸಿ.ರವಿಕುಮಾರ್, ಡಿ.ಜೆ.ಈಶ್ವರ್, ಆರ್.ವಿ.ಪ್ರಸನ್ನ ಇತರರಿದ್ದರು.