

ಹುಬ್ಬಳ್ಳಿ: ಆಟೋರಿಕ್ಷಾ ಚಾಲಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳಿಂದ ಇಲ್ಲಿನ ವಿದ್ಯಾನಗರದ ಅಕ್ಷಯ ಕಾಲನಿಯ ಇಂಡಿಯನ್ ಆಟೋರಿಕ್ಷಾ ನಿಲ್ದಾಣದಲ್ಲಿ ನ. 1ರಂದು ಬೆಳಗ್ಗೆ 11ಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ತೋಳನಕೆರೆಯಿಂದ ಚನ್ನಮ್ಮ ವೃತ್ತದವರೆಗೆ ತಾಯಿ ಭುವನೇಶ್ವರಿ ಭಾವಚಿತ್ರವಿರುವ ಆಟೋದ ಮೆರವಣಿಗೆ ನಡೆಯಲಿದೆ. ಸಾಂಸ್ಕೃತಿಕ ವಾದ್ಯಮೇಳ, ಕೋಲಾಟ, ಹೆಜ್ಜೆ ಮಜಲು, ಡೊಳ್ಳು ಕುಣಿತ ಭಾಗವಹಿಸಲಿವೆ. 400ಕ್ಕೂ ಹೆಚ್ಚು ಆಟೋಗಳು, ಸಾವಿರಕ್ಕೂ ಹೆಚ್ಚು ಜನರು ಇರುವರು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ್, ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ, ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಸೇರಿ ಇತರರು ಭಾಗವಹಿಸುವರು ಎಂದರು.
ನಮ್ಮ ಮಹಾನಗರದಲ್ಲಿ ತ್ರಿಭಾಷಾ ಸೂತ್ರದಡಿ ನಾಮಫಲಕಗಳನ್ನು ಅಳವಡಿಸಲು ಪಾಲಿಕೆಗೆ ನ. 30ರವರೆಗೆ ಗಡುವು ನೀಡಿದ್ದೇವೆ. ಶೇ. 80ರಷ್ಟು ಕನ್ನಡ ನಾಮಫಲಕ ಇರಬೇಕು. ಒಂದು ವೇಳೆ ಸಣ್ಣ ಮತ್ತು ದೊಡ್ಡ ಅಂಗಡಿಗಳ ನಾಮಫಲಕಗಳಲ್ಲಿ ಈ ಸೂತ್ರ ಅಳವಡಿಕೆ ಆಗದೇ ಇದ್ದರೆ. ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣ ಹಿಂಪಡೆಯಲು ಪಾಲಿಕೆ ಸಾಮನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಿ, ರಾಜ್ಯ ಸರ್ಕಾರಕ್ಕೆ ರವಾನಿಸಬೇಕು ಎಂದು ಇಜಾರಿ ಒತ್ತಾಯಿಸಿದರು.
ಚಿದಾನಂದ ಸವದತ್ತಿ, ಮುಸ್ತಾಕ ಕರ್ಜಗಿ, ಬಸವರಾಜ ಉಣಕಲ್, ಪುಂಡಲೀಕ ಬಡಿಗೇರ, ಶಬ್ಬೀರ ಬಾಗೇವಾಡಿ, ಪೀರಪ್ಪ ಸವದತ್ತಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.