ಆಟೋ ಚಾಲಕರಿಗೆ ಹೆಚ್ಚು ಕನ್ನಡಾಭಿಮಾನ: ಶಾಸಕ ರವಿಕುಮಾರ್ ಗಣಿಗ ಶ್ಲಾಘನೆ

Kannada Rajyotsava Auto Drivers Association mandya
Published on

ಮಂಡ್ಯ: ಆಟೋ ಚಾಲಕರಲ್ಲಿನ ಹೆಚ್ಚಿನ ಕನ್ನಡಾಭಿಮಾನದಿಂದ ಭಾಷೆ ಉಳಿದಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕರ್ನಾಟಕ ಬಾರ್ ವೃತ್ತದಲ್ಲಿ ಜೈ ಕರ್ನಾಟಕ ಆಟೋ ನಿಲ್ದಾಣದ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಮಾತೃಭಾಷೆಯ ಬಗ್ಗೆ ಅಪಾರ ಅಭಿಮಾನ ಇರಿಸಿ ಕನ್ನಡ ಭಾಷೆಯ ಬಗ್ಗೆ ಸದಾ ಜಾಗೃತರಾಗಿರುವ ಆಟೋ ಚಾಲಕರು ಭಾಷೆ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಹೊರ ರಾಜ್ಯದಿಂದ ಬಂದವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ. ಕನ್ನಡ ನಾಡಿನ ಆಟೋ ಚಾಲಕರ ಮಕ್ಕಳು ಆಟೋ ಚಾಲನಾ ವೃತ್ತಿ ಆಯ್ಕೆ ಮಾಡಿಕೊಳ್ಳದೆ ಇಂಜಿನಿಯರ್, ವೈದ್ಯರು ಮತ್ತು ಉನ್ನತಮಟ್ಟದ ಅಧಿಕಾರಿಗಳಾಗಬೇಕು. ಗೌರಿಶಂಕರ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತದವರೆಗೆ 5 ಕೋಟಿ ರೂ ವೆಚ್ಚದಲ್ಲಿ ಪಾದಚಾರಿ ಮಾರ್ಗ, ಪಾರ್ಕಿಂಗ್ ವ್ಯವಸ್ಥೆಯುಳ್ಳ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಅದೇ ರೀತಿ ಕರ್ನಾಟಕ ಭಾರತದ ಜೈ ಕರ್ನಾಟಕ ಆಟೋ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಮಾಡಲು 1 ಲಕ್ಷ ರೂ ಅನುದಾನ ನೀಡಲಾಗುವುದು ಎಂದರು.

ನೋಂದಣಿಯಾಗದ ಆಟೋ ಸಂಚಾರಕ್ಕೆ ಡಿ.1 ರಿಂದ ನಿರ್ಬಂಧ ಹಾಕಲಾಗುವುದು. ಆದ್ದರಿಂದ ಚಾಲಕರು ಈ ಬಗ್ಗೆ ಎಚ್ಚೆತ್ತು ನೋಂದಣಿ ಮಾಡಿಸಿ ಸಂಚಾರ ಮಾಡಬೇಕು. ಆಟೋ ಚಾಲನಾ ವೃತ್ತಿಯಲ್ಲಿ ಹೆಚ್ಚು ಆದಾಯಗಳಿಸುವ ರೀತಿ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಬದ್ಧನಾಗಿದ್ದು, ಚಾಲಕರು ಸಹ ಕಾನೂನು ಪಾಲಿಸುವ ಮೂಲಕ ವೃತ್ತಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ನಹೀಂ, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಕಾಂಗ್ರೆಸ್ ಮುಖಂಡ ಜಬಿಉಲ್ಲಾ, ಯುವ ಮುಖಂಡ ಕಾರ್ತಿಕ್‌ಗೌಡ, ಲೋಕೇಶ್, ಶೈಲೇಂದ್ರ, ಕಾಂತರಾಜು, ವಕೀಲ ಜೆ.ರಾಮಯ್ಯ, ಸಂಘದ ರಾಬರ್ಟ್, ಯತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net