

ಮಂಡ್ಯ: ಕನ್ನಡ ಭಾಷೆ, ಜಲ, ಸಂಸ್ಕೃತಿಗಳ ಬಗ್ಗೆ ಜನತೆ ಜಾಗೃತರಾಗಬೇಕು. ಇಲ್ಲದಿದ್ದರೆ ಮುಂದೊಂದು ದಿನ ಪರಿಸ್ಥಿತಿ ವಿಪರೀತಕ್ಕೆ ಹೋಗಿ ನಮ್ಮ ಅಸ್ಮಿತೆ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಲಿದೆ ಎಂದು ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.
ನಗರದ ಹೊಯ್ಸಳ ಸಭಾಂಗಣದಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ, ನಗರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ದಾಸವಾಣಿ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಶ್ರೇಷ್ಟ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಂಗೀತ, ನೃತ್ಯ, ಸಾಹಿತ್ಯ ಚಟುವಟಿಕೆ ಮಹತ್ತರ ಪಾತ್ರ ವಹಿಸುತ್ತದೆ. ಈ ಚಟುವಟಿಕೆಗಳಿಗೆ ಜನರ, ಸಂಘಟನೆಗಳ ಪ್ರೋತ್ಸಾಹ, ಸಹಕಾರ ಅತ್ಯಂತ ಅಗತ್ಯ ಎಂದರು.
ಕರವೇ ಜಿಲ್ಲಾ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿ, ಕರ್ನಾಟಕದ ಶ್ರೇಷ್ಟ ಪರಂಪರೆಯ ಉಳಿವಿಗೆ ಹೋರಾಟ ಮಾಡಬೇಕಾಗಿರುವುದು ದುರಂತ. ಈ ನಿಟ್ಟಿನಲ್ಲಿ ಕನ್ನಡಿಗರು ಎಚ್ಚೆತ್ತುಕೊಂಡು ಕಲೆ ಹಾಗೂ ಕಲಾವಿದರನ್ನು ಬೆಳೆಸುವುದರ ಮೂಲಕ ನಿರಂತರ ಹೋರಾಟಕ್ಕೆ ಸಜ್ಜಾಗಬೇಕು. ಜನರಲ್ಲಿ ಜಾಗೃತ ಮನೋಭಾವನೆಯನ್ನು ಉಂಟು ಮಾಡಬೇಕು ಎಂದು ಕರೆ ನೀಡಿದರು.
ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತಾಕೃಷ್ಣ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20ರಿಂದ 22ರವರೆಗೆ ನಡೆಯಲಿದೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಂಕರ ನಾರಾಯಣಶಾಸ್ತ್ರಿ, ಜಿ.ವಿ.ನಾಗರಾಜು, ಕೆ.ಪ್ರಭಾಕರ್, ಹೊಳಲು ರಾಘವೇಂದ್ರ, ಗೊರವಾಲೆ ಚಂದ್ರಶೇಖರ್, ಮಮತಾ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಗಾಯಕ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ಮತ್ತು ಬಸವರಾಜು ತಂಡ ನಡೆಸಿಕೊಟ್ಟ ದಾಸವಾಣಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.