

ಮೈಸೂರು: ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಎಂದು ನಟ ಮದನ್ ಪಟೇಲ್ ಕಳವಳ ವ್ಯಕ್ತಪಡಿಸಿದರು.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಮತ್ತು ಕನ್ನಡ ಸಹೃದ ಬಳಗ ವತಿಯಿಂದ ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಹೊರ ರಾಜ್ಯದಿಂದ ಆಗಮಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಅವರು ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೊರ ರಾಜ್ಯದಿಂದ ಆಗಮಿಸಿದವರಿಗೆ ಪ್ರೀತಿಯಿಂದ ಕನ್ನಡ ಕಲಿಸುವ ಕಾರ್ಯ ಆಗಬೇಕು. ಹೊರ ರಾಜ್ಯದ ಸಾಕಷ್ಟು ಜನರು ಇಲ್ಲಿ ಕನ್ನಡ ಕಲಿತು ಮಾತನಾಡುತ್ತಿರುವುದನ್ನು ಸಹ ನಾನು ನೋಡಿದ್ದೇನೆ ಎಂದರು.
ತಮಿಳುನಾಡಿನಲ್ಲಿ ಎಲ್ಲರು ತಮಿಳಿನಲ್ಲೇ ವ್ಯವಹರಿಸುತ್ತಾರೆ. ಆ ರೀತಿಯಯ ಭಾಷಾ ಅಭಿಮಾನ ನಮ್ಮಲ್ಲೂ ಮೂಡಬೇಕು. ಕನ್ನಡ ಉಳಿಸಲು ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರವಾಗಿದೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡದಲ್ಲಿ ವ್ಯವಹರಿಸಲು ಪ್ರಾರಂಭಿಸಿದರೆ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಹೃದ ಬಳಗದ ಅಧ್ಯಕ್ಷ ಕೃಷ್ಣಯ್ಯ ಮಾತನಾಡಿ, ಹರಿದುಹಂಚಿ ಹೋಗಿದ್ದ ಕನ್ನಡನಾಡು ಹೋರಾಟದ ಮೂಲಕ ಒಗ್ಗೂಡಿತು. ಈ ಕಾರಣಕ್ಕಾಗಿ ನಾಡಿನಾದ್ಯಂತ ಎಲ್ಲರು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪರ್ವತಂ, ಕವಯಿತ್ರಿ ಅಮ್ಮಯ್ಯ ಶೇಖರ್ ಇದ್ದರು.