ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ಕನ್ನಡ ರಾಜ್ಯೋತ್ಸವ’ ಆಚರಣೆ

ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ಕನ್ನಡ ರಾಜ್ಯೋತ್ಸವ’ ಆಚರಣೆ
Published on

ನಮ್ಮ ಕನ್ನಡ ಇಡೀ ದೇಶದಲ್ಲಿ ಅತ್ಯಂತ ಕಡಿಮೆ ವೇಗದಲ್ಲಿ ಬೆಳೆಯುತ್ತಿರುವ ಭಾಷೆಯಾಗಿದ್ದು, ಎಲ್ಲ ಹಂತದಲ್ಲೂ ಬಳಕೆಗೆ ಬಂದಾಗ ಮಾತ್ರ ನಮ್ಮ ಭಾಷೆ ಉಳಿಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಹೇಳಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮ-2024 ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ತಿಳಿದಷ್ಟು ಕನ್ನಡ ಭದ್ರವಾಗಿಲ್ಲ. ಕನ್ನಡ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ದೇವರಿಗೆ ಕನ್ನಡ ಕಲಿಸಿದ ಪರಂಪರೆ ಹೊಂದಿರುವ ನಾವು ಜೊಮ್ಯಾಟೊ ಬಾಯ್‌ಗೆ ಏಕೆ ಕನ್ನಡ ಕಲಿಸುತ್ತಿಲ್ಲ. ಬದಲಿಗೆ ಅವನ ಜತೆ ಹಿಂದಿಯಲ್ಲಿ ಮಾತನಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಹಿಂದಿ ವೇಗವಾಗಿ ಬೆಳೆಯುತ್ತಿರುವ ಭಾಷೆಯಾಗಿದೆ. ಅದು ಶೇ.66ರಷ್ಟು ವೇಗದಲ್ಲಿ ಬೆಳೆಯುತ್ತಿದೆ. ಬಾಂಗ್ಲಾ ಭಾಷೆಯು ಶೇ.16ರಷ್ಟು ವೇಗದಲ್ಲಿ ಬೆಳೆಯುತ್ತಿದೆ. ತಮಿಳು, ಮಲಯಾಳ, ಮರಾಠಿ, ಪಂಜಾಬಿ, ಗುಜರಾತಿ ಭಾಷೆಗಳು ಶೇ.12 ರಿಂದ 13ರಷ್ಟು ವೇಗದಲ್ಲಿ ಬೆಳೆಯುತ್ತಿವೆ. ಆದರೆ, 2 ಸಾವಿರ ವರ್ಷಗಳ ಪರಂಪರೆಯಿರುವ ಕನ್ನಡ ಭಾಷೆ ಶೇ.3.73ರಷ್ಟು ಬೆಳೆಯುತ್ತಿದೆ. ಇದು ಇಡೀ ದೇಶದಲ್ಲಿ ಅತ್ಯಂತ ಕಡಿಮೆ ವೇಗದಲ್ಲಿ ಬೆಳೆಯುತ್ತಿರುವ ಭಾಷೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಪುಸ್ತಕ ಹೊರತರಬೇಕು

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. 1924ರಲ್ಲಿ ನಡೆದ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಗಾಂಧೀಜಿ ಅವರು ಕರ್ನಾಟಕ ಏಕೀಕರಣ ಚಳವಳಿ ಮತ್ತು ಸ್ವಾತಂತ್ರೃ ಹೋರಾಟ ಚಳವಳಿಗಳು ಮುಖಾಮುಖಿಯಾಗಿ ಶಕ್ತಿ ಕಡಿಮೆಯಾಗಬಾರದು ಎಂದು ನೋಡಿಕೊಂಡಿದ್ದರು. ಏಕೀಕರಣ ಪೂರ್ವದಲ್ಲಿ ಕರ್ನಾಟಕ ಹೇಗೆ ಇರಬೇಕು ಎಂದು ಆಲೂರು ವೆಂಕಟರಾಯರು, ಬಿಎಂಶ್ರೀ ಸೇರಿದಂತೆ ಇತರರು ಬರೆದಿದ್ದರು. ಇದೀಗ ನೂರು ವರ್ಷವಾದರೂ ಅವರ ಬರವಣಿಗೆಯ ರೀತಿ ಕರ್ನಾಟಕ ಹಾಗೇ ಇದೆ. ಆದ್ದರಿಂದ ಅವರ ಬರೆದಿರುವ ಬರವಣಿಗೆಗಳನ್ನು, ಕರ್ನಾಟಕ ಸುವರ್ಣ ಸಂಭ್ರಮ, ಕರ್ನಾಟಕ ಏಕೀಕರಣ, ಬೆಳಗಾವಿ ಕಾಂಗ್ರೆಸ್ ಅಧಿವೇಶನ, ಗಾಂಧಿ ಮತ್ತು ಕರ್ನಾಟಕದ ಭಾವನಾತ್ಮಕ ಸಂಬಂಧಗಳ ಬಗ್ಗೆ ಪುಸ್ತಕವನ್ನು ಬರೆಯುವ ಮೂಲಕ ರಾಜ್ಯದ ಪ್ರತಿಯೊಬ್ಬ ಶಾಲಾ-ಕಾಲೇಜು ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕುವೆಂಪು ‘ಜಯ ಭಾರತ ಜನನಿಯ ತನುಜಾತೆ’ ಪದ್ಯ ಬರೆದು ಆ ಕಾಲದಲ್ಲಿ ನಡೆಯಬಹುದಾದ ಸಂಕಷ್ಟಕ್ಕೆ ಮಂಗಳ ಹಾಡಿದರು. ಭಾರತಕ್ಕೂ ಸ್ವಾತಂತ್ರೃ ಸಿಗಬೇಕು, ಕರ್ನಾಟಕ ಏಕೀಕರಣ ಆಗಬೇಕು ಎಂಬ ಸಂದೇಶ ಸಾರಿದರು. ಆ ಕಾಲದ ಜನ ಸ್ವಾತಂತ್ರೃ ಪಡೆಯಲು ಅನುಸರಿಸಿದ ತಂತ್ರಗಳು, ಏಕೀಕರಣಕ್ಕಾಗಿ ಕನ್ನಡಿಗರು ಮಾಡಿದ ಕೆಲಸಗಳು ಇಂದಿಗೂ ಮಾದರಿ ಆಗಿವೆ. ಅವು ಕಳೆದು ಹೋದ ಘಟನೆಗಳಲ್ಲ. ಅದು ವರ್ತಮಾನಕ್ಕೂ ಅಗತ್ಯ ಇದೆ ಎನ್ನುವುದನ್ನು ತಿಳಿದರೆ ಮಾತ್ರ ಇತಿಹಾಸವನ್ನು ಸಂಭ್ರಮಿಸಬಹುದಾಗಿದೆ ಎಂದರು.

ಇತಿಹಾಸವನ್ನು ವೈಭವಿಕರಿಸುವುದು ವ್ಯಸನ ಆಗಬಾರದು. ಅದನ್ನು ನಾವು ಮಾಡುವುದಿಲ್ಲ. ಅದನ್ನು ಆರ್‌ಎಸ್‌ಎಸ್‌ನವರು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ, ಸಂಘದ ಅಧ್ಯಕ್ಷ ಬಿ.ಶಿವಸ್ವಾಮಿ, ಕಾರ್ಯದರ್ಶಿ ಬಿ.ಪಿ.ರಾಜೇಶ್, ಉಪಾಧ್ಯಕ್ಷ ಆರ್.ಮಹದೇವ್, ಜಂಟಿ ಕಾರ್ಯದರ್ಶಿ ರಮೇಶ್ ಗೌಡ, ಅಹಿಂದ ಜವರಪ್ಪ, ಮಹೇಶ್ ಸೋಸ್ಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net