

ಮೈಸೂರು: ಕನ್ನಡ ನಾಡಿನ ಕುರಿತು ಅಭಿಮಾನ ಪಡಲು ಸಾವಿರಾರು ಕಾರಣಗಳು ಇದ್ದು, ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಕನ್ನಡಿಗರು ಅಭಿಮಾನ ಹೊಂದಬೇಕು ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ವಸುಂಧರಾ ಕರೆ ನೀಡಿದರು.
ಮಹಾರಾಜ ಕಾಲೇಜು ವತಿಯಿಂದ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೊ ೀತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿಗೆ ಭವ್ಯವಾದ ಪರಂಪರೆ ಇದೆ. ಹಲವು ವೀರ ಶೂರರು, ಕವಿಗಳನ್ನು ಕಂಡಿರುವ ನಾಡು ನಮ್ಮದು. ನಾವು ನಮ್ಮ ಹಿರಿಯರ ಸಾಧನೆಗಳ ಕುರಿತು ಹೆಮ್ಮೆ ಪಡುವ ಜತೆಗೆ ನಾವು ಏನನ್ನಾದರೂ ಸಾಧಿಸುವ ಮೂಲಕ ಕನ್ನಡ ನಾಡಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಬಹಳಷ್ಟು ಜನರಿಗೆ ಕನ್ನಡ ಮಾತನಾಡುವುದು ಅವಮಾನಕರ ವಿಷಯವಾಗಿದೆ. ನಮ್ಮ ಭಾಷೆಯ ಬಗ್ಗೆ ನಾವು ಅಭಿಮಾನ ಪಡಬೇಕು. ಕನ್ನಡಿಗರು ಅಭಿಮಾನ್ಯ ಶೂನ್ಯರಾಗಿರುವುದು ಬೇಸರದ ವಿಚಾರ. ಮನೆಯಿಂದಲೇ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯ ಆಗಬೇಕು. ಕನ್ನಡದ ಅಂಕಿ ಸಂಖ್ಯೆ ಬಹುತೇಕರಿಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಎಸ್. ಕುಮಾರ್ ಮಾತನಾಡಿ, ಜಾಗತಿಕವಾಗಿ ಇಂಗ್ಲಿಷ್ ಭಾಷೆ ಬಳಕೆಯಲ್ಲಿರುವ ಹಿನ್ನೆಲೆಯಲ್ಲಿ ನಮಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ. ಹಾಗಂತ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಕಡೆಗಣಿಸಬಾರದು. ಕನ್ನಡ ನಮ್ಮ ಜೀವ ಭಾಷೆಯಾಗಿದೆ. ಹೊರರಾಜ್ಯದ ಹಲವಾರು ಜನರು ರಾಜ್ಯಕ್ಕೆ ಬಂದು ಕನ್ನಡ ಕಲಿಯಲು ಪ್ರಯತ್ನಿಸುತ್ತಾರೆ. ಆದರೆ, ನಮ್ಮವರೇ ಅವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಹೊರಗಿನಿಂದ ಬಂದವರಿಗೆ ಕನ್ನಡ ಕಲಿಸುವ ಕಾರ್ಯವನ್ನು ಕನ್ನಡಿಗರು ಮಾಡಬೇಕು ಎಂದರು.
ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ.ವಿ. ಷಣ್ಮುಗಂ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ. ವಿಜಯಲಕ್ಷ್ಮಿ, ಪಠ್ಯೇತರ ಚಟುವಟಿಕೆ ಸಮಿತಿ ಸಂಚಾಲಕ ಪ್ರೊ.ಸಿ.ಇ. ಲೋಕೇಶ್, ಕನ್ನಡ ಸಂಘದ ಸಂಚಾಲಕ ಪ್ರೊ.ಸಿ.ಕೆ. ಪುಟ್ಟಸೋಮಾಚಾರ್ ಇದ್ದರು.