

ಮಂಡ್ಯ: ತನ್ನಷ್ಟಕ್ಕೆ ತಾನೇ ಯಾವುದೇ ಭಾಷೆಯೂ ಬೆಳೆಯುವುದಿಲ್ಲ. ನಮ್ಮ ಕನ್ನಡ ಸರ್ವ ಶ್ರೇಷ್ಠ ಭಾಷೆಯಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಮತ್ತು ಮಿಮ್ಸ್ ಕನ್ನಡ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ಭಾಷೆ ಮತ್ತು ನಾಡಿನ ಬಗ್ಗೆ ಹೆಮ್ಮೆ ಇರಬೇಕು. ಕನ್ನಡವನ್ನು ಪ್ರೀತಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ಕಲಿತರೆ ಶ್ರೇಷ್ಠ ಎನ್ನುವ ಮನೋಭಾವವನ್ನು ಎಲ್ಲರೂ ಬಿಡಬೇಕು ಎಂದು ಸಲಹೆ ನೀಡಿದರು.
ನಾವು ನುಡಿದಂತೆ ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಬಸವಣ್ಣ, ಕುವೆಂಪು ಸೇರಿದಂತೆ ಹಲವು ಮಹನೀಯರು ನುಡಿದಂತೆ ನಡೆದು ತೋರಿಸಿದ್ದಾರೆ. ವಚನಕಾರರು ನಡೆದ ದಾರಿಯಲ್ಲಿ ಎಲ್ಲರೂ ಸಾಗಬೇಕು. ಪ್ರೀತಿಯನ್ನು ಹಂಚುವ ಮೂಲಕ ಸಹಬಾಳ್ವೆಯ ಜೀವನ ನಡೆಸಬೇಕು. ಇಂತಹ ಸನ್ನಿವೇಶಗಳು ಎಲ್ಲಿಯೂ ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಡಾ.ಪಿ.ಎಸ್.ತಮ್ಮಣ್ಣ, ಡಾ.ಪಿ.ವಿ.ಶ್ರೀಧರ್, ಡಾ.ನಾಗರಾಜು, ಸಿ.ಎಂ.ಉಮೇಶ್, ಡಾ.ಬಿ.ಆರ್. ಹರೀಶ್ ಇತರರಿದ್ದರು.