

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕದ ಆಡಳಿತ ಭಾಷೆ ಕನ್ನಡವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಜೆಡಿಎಸ್ ಮುಖಂಡ ನಾಪಂಡ ಮುದ್ದಪ್ಪ ಕರೆ ನೀಡಿ ದರು.
ಕೊಡಗು ರಕ್ಷಣಾ ವೇದಿಕೆ ಆಟೋ ಚಾಲಕರ ಸಂಘ ಆಶ್ರಯದಲ್ಲಿ ಮಹದೇವಪೇಟೆ ಆಟೋ ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕೊಡಗು ಸೇರಿದ್ದಂತೆ ರಾಜ್ಯದ ವಿವಿಧೆಡೆಯಲ್ಲಿ ಸಾಕಷ್ಟು ಜನರ ಮಾತೃಭಾಷೆ ಬೇರೆ- ಬೇರೆಯಾಗಿದೆ. ಹೀಗಿದ್ದರೂ, ಕನ್ನಡ ನಾಡಿನ ಆಡಳಿತ ಭಾಷೆಯಾಗಿರುವ ಕನ್ನಡವನ್ನು ವೃತ್ತಿ ಭಾಷೆ ಯಾಗಿ ಬಳಸುವುದರ ಮೂಲಕ ಉಳಿಸಿ- ಬೆಳೆಸಬೇಕೆಂದರು.
ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮಾತನಾಡಿ, ರಾಜ್ಯದ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ತಮಿಳು- ತೆಲುಗು ಭಾಷೆ ಪ್ರಾಬಲ್ಯ ಹೆಚ್ಚಾಗಿದೆ. ಅದೇ ಪರಿಸ್ಥಿತಿ ಕೊಡಗಿಗೆ ಬರುವುದು ಬೇಡ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದರು.
ಮಡಿಕೇರಿಯ ಐವರು ಹಿರಿಯ ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಿನಪೂರ್ತಿ ಕನ್ನಡ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಕೊಡಗು ರಕ್ಷಣಾ ವೇದಿಕೆ ಆಟೋ ಚಾಲಕರ ಸಂಘ ಉಸ್ತುವಾರಿ ಸುಲೇಮಾನ್, ಮುಖಂಡರಾದ ರಫೀಕ್, ವರ್ಗೀಸ್, ಹ್ಯಾರಿಸ್, ರಕ್ಷಣಾ ವೇದಿಕೆ ಮಡಿಕೇರಿ ನಗರಾಧ್ಯಕ್ಷ ಚೊಟ್ಟೆಯಂಡ ಶರತ್, ಜಿಲ್ಲಾ ನಿರ್ದೇಶಕ ಪಾಪು ರವಿ ಮತ್ತಿತರರು ಇದ್ದರು.