

ಕುಶಾಲನಗರ: ಕನ್ನಡದ ಸೇವೆ ಮಾಡಲು ಹೆಮ್ಮೆಯಾಗುತ್ತೆ. ಕನ್ನಡ ಮಾತನಾಡುವುದರ ಜತೆಗೆ ಬೇರೆ ಭಾಷೆಗಳನ್ನು ಪ್ರೀತಿಸುವಂತೆ ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸುಮನ್ ಬಾಲಚಂದರ್ ಹೇಳಿದರು.
ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಅಗಾಧವಾದ ಶಕ್ತಿಯಿದೆ. ವಿಶ್ವದ ನಾನಾ ಭಾಗಗಳಿಂದ ಕರುನಾಡಿಗೆ ಆಗಮಿಸಿ ಇಲ್ಲಿಯ ಆಚಾರ, ವಿಚಾರಗಳನ್ನು ಗೌರವಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ಕಾಣಬಹುದು. ಹಲವು ವಿದೇಶಿಯರು ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ಕೇಳುತ್ತಿದ್ದೇವೆ. ಅಂತಹ ಸುಂದರ ಕನ್ನಡವನ್ನು ನಾವು ಪ್ರೀತಿಸಿ, ಬಳಕೆ ಮಾಡಬೇಕೆಂದು ಕರೆನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ನಾವೆಲ್ಲರೂ ಕನ್ನಡದ ಉಳಿವಿಗಾಗಿ ಪಣ ತೊಡಬೇಕಾಗಿದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ನಾವು ನಿರಂತರವಾಗಿ ಬಳಸುವಂತೆ ಆಗಬೇಕು. ಆಗ ಮಾತ್ರ 2500 ವರ್ಷಗಳ ಇತಿಹಾಸವಿರುವ ಕಸ್ತೂರಿ ಕನ್ನಡ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯದರ್ಶಿ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಚಿಣ್ಣಪ್ಪ, ಖಜಾಂಚಿ ನಿತಿನ್.ಎನ್.ಗುಪ್ತ, ಹರ್ಷ, ಡಾ.ಪ್ರವೀಣ್, ಡಾ.ರಾಘವೇಂದ್ರ, ವಿವೇಕ್, ಶ್ರೀನಿವಾಸ್, ಪೊನ್ನಚ್ಚನ ಮೋಹನ್ ಇತರರು ಹಾಜರಿದ್ದರು.