

ಉಡುಪಿ: ನಾಡು ನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಕ್ಕಲಿಗ, ಲಿಂಗಾಯತ, ಬೇಡ, ಕುರುಬ, ಬ್ರಾಹ್ಮಣ, ದಲಿತ, ಮುಸಲ್ಮಾನ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲ ಕನ್ನಡದ ಜನ ಕನ್ನಡದ ಉಳಿವು ಬೆಳವಣಿಗೆಗೆ ಒಂದಾಗುವುದು ತೀರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಂದೇಶ ನೀಡಿದರು. ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಅಡಳಿತ ಭಾಷೆಯಾಗಿ ಬಳಸುವುದು, ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದು, ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಗುರುತಿಸಿ ಗೌರವಿಸುವುದು, ಸಿನೆಮಾ, ಮನೋರಂಜನ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆ ಸಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಕನ್ನಡತನವನ್ನು ವ್ಯಾಪಿಸಲು ಪ್ರಯತ್ನಿಸಲಾಗುತ್ತಿದೆ. ವಿವಿಧ ಪ್ರಾಂತಗಳಲ್ಲಿ ಚದುರಿಹೋಗಿದ್ದ ಕನ್ನಡಿಗರು ಕರ್ನಾಟಕ ರಾಜ್ಯ ಏಕೀಕರಣದ ಸಂದರ್ಭದಲ್ಲಿ ತೋರಿದ ಸಹಮತ ಮತ್ತು ಸಹಬಾಳ್ವೆ ನೂತನ ಕರ್ನಾಟಕ ರಾಜ್ಯ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ರಾಜ್ಯದ ಪ್ರಗತಿಗೆ ಸರ್ವರ ಸಹಕಾರ ಮತ್ತು ಸಮನ್ವಯತೆ ಅತೀ ಅಗತ್ಯವಾಗಿದೆ ಎಂದರು.
ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ ಮುಂಬೈ ಪ್ರಾಂತ, ಮದರಾಸ್ ಪ್ರಾಂತ ಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ರಾಜ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ ನ. 1ರಂದು 1956ರಲ್ಲಿ ಉದಯಗೊಂಡದ್ದು, ದೇವರಾಜ ಅರಸ್ ಅವರ ಆಳ್ವಿಕೆಯ ಕಾಲದಲ್ಲಿ 1973, ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು. ಇತಿಹಾಸ, ಭಾಷೆ, ನಾಡು ನುಡಿಯ ಕುರಿತು ಅಭಿಮಾನವನ್ನು ತೋರ್ಪಡಿಸುವಲ್ಲಿ ಗೋಕಾಕ್ ಚಳುವಳಿ, ಸಿನಿಮಾರಂಗ, ಪುಸ್ತಕ ಪುಪಂಚ ಯಶಸ್ವಿಯಾಗಿದ್ದು, 2008 ರಲ್ಲಿ ಕನ್ನಡಿಗರ ಒತ್ತಾಸೆಯಂತೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಕನ್ನಡ ಭಾಷೆ ಪಡೆದ ಸಂಭ್ರಮ ನಮ್ಮ ಭಾಷೆಗಿದೆ. ಭಾರತದಲ್ಲಿ ರಾಷ್ಟ್ರೀಯ ಭಾಷೆಯ ಗೌರವ ಪಡೆದ ಆರು ಭಾಷೆಗಳಲ್ಲಿ ಕನ್ನಡ ಮೂರನೇಯದ್ದಾಗಿದೆ. ಗಡಿನಾಡುಗಳಲ್ಲಿ, ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡಿಗರು ಒಂದಾಗಿ ಕನ್ನಡದ ತೇರನ್ನು ಎಳೆಯುತ್ತಿರುವುದನ್ನು ವಿಶೇಷವಾಗಿ ಉಲ್ಲೇಖಿಸಬೇಕಿದೆ ಎಂದರು.
ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ್ ಕಲ್ಮಾಡಿ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಂದ್ರ ಅಡಿಗ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 34 ಮಂದಿ ಸಾಧಕರಿಗೆ ಹಾಗೂ 2 ಸಂಘಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಂತಾರ ಚಿತ್ರದಲ್ಲಿ ಜಾನಪದ ಹಾಡು ಹಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗರಾಜ ಪಾಣ ಅವರು 3 ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಮೈದಾನದವರೆಗೆ ವಿವಿಧ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಿತು.